ಚಕ್ರವರ್ತಿಯನ್ನ ಬೈದ್ರೆ ಪಕ್ಷಕ್ಕೆ ಹಿನ್ನಡೆ: ಸದಾನಂದಗೌಡ್ರನ್ನ ಹಿಗ್ಗಾಮುಗ್ಗಾ ಜಾಡಿಸಿದ ಬಿಜೆಪಿ ನಾಯಕ
ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂಬ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕ ಬಿಜೆಪಿ ಸಂಸದರ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ನೆರೆ ಪರಿಹಾರ ವಿಚಾರವಾಗಿ ಇತ್ತೀಚೆಗೆ ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದಿದ್ದ ಬಿಜೆಪಿ ಶಾಸಕ ಯತ್ನಾಳ್ ಮತ್ತೆ ಕೇಂದ್ರದ ವಿರುದ್ಧ ಕಿಡಿಕಾರಿದ್ದು, ಚಿಂತಕ ಚಕ್ರವರ್ತಿ ಸೂಲಿಬೆಲೆ ಪರ ಬ್ಮಾಟಿಂಗ್ ಮಾಡಿದ್ದಾರೆ. ಹಾಗಾದ್ರೆ ರಾಜ್ಯದ ಸ್ವಪಕ್ಷದ ಸಂಸದರನ್ನ ತರಾಟೆಗೆ ತೆಗೆದುಕೊಂಡ ವೈಖರಿ ಈ ಕೆಳಗಿನಂತಿದೆ..
ವಿಜಯಪುರ,(ಅ.03): ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ನೆರೆ ಪರಿಹಾರ ವಿಚಾರದಲ್ಲಿ ಮತ್ತೆ ಸ್ವಪಕ್ಷದ ರಾಜ್ಯ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು (ಗುರುವಾರ) ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಕೇಳುವುದರಲ್ಲಿ ತಪ್ಪೇನಿಲ್ಲ. ಚಕ್ರವರ್ತಿ ಮೋದಿ ಪ್ರಧಾನಿಯಾಗಲಿ ಎಂದು ತಪಸ್ಸು ಮಾಡಿದ ವ್ಯಕ್ತಿ. ನಿಮ್ಮ ವೈಫಲ್ಯಗಳನ್ನ ಅವರ ಮೇಲೆ ಯಾಕೆ ಹಾಕ್ತೀರಿ. ಅವರ ವಿರುದ್ಧ ಟೀಕೆ ಮಾಡುವ ನೈತಿಕತೆ ನಿಮಗೆ ಇಲ್ಲ ಎಂದು ಸ್ವಪಕ್ಷೀಯ ಸಂಸದರು, ಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ನಿಮ್ಮ ಮಂತ್ರಿಗಿರಿ ಕರುನಾಡು ಜನರ ಭಿಕ್ಷೆ: ಸದಾನಂದಗೌಡ್ರಿಗೆ ಚಕ್ರವರ್ತಿ ತಿರುಗೇಟು
ಚಕ್ರವರ್ತಿಯವರಿಗೆ ಬೈದು ನಿಮ್ಮ ಗೌರವ ಅಷ್ಟೆ ಅಲ್ಲ ಪ್ರಧಾನಿಯ ಗೌರವವನ್ನು ಕಳೆಯಬೇಡಿ. ಚಕ್ರವರ್ತಿಯವರನ್ನು ಬೈದರೆ ಪಕ್ಷಕ್ಕೆ ಹಿನ್ನಡೆಯಾಗುತ್ತೆ ಎಂದು ಸ್ವಪಕ್ಷದ ನಾಯಕರನ್ನು ಹಿಗ್ಗಾಮುಗ್ಗಾ ಜಾಡಿಸಿದರು.
ಅದರಲ್ಲೂ ರಾಜ್ಯ ಸಂಸದರ ವಿರುದ್ಧ ಅಸಮಾಧಾನ ಹೊರಹಾಕಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ದೇಶದ್ರೋಹಿ ಎನ್ನುವ ಅರ್ಥದಲ್ಲಿ ಟೀಕಿಸಿದ್ದ ಕೇಂದ್ರ ಸಚಿವ ಸದಾನಂದಗೌಡರಿಗೆ ಪರೋಕ್ಷವಾಗಿ ತಿವಿದರು.
ಪ್ರಶ್ನೆ ಕೇಳಿದ ಸೂಲಿಬೆಲೆ, ಸುವರ್ಣ ನ್ಯೂಸ್‌ಗೆ ಗೌಡರಿಂದ ಬ್ಲಾಕ್ ಭಾಗ್ಯ, ಆದ್ರೇನಾಯ್ತು!
ಹೋಗ್ರಿ ಪ್ರಧಾನಿ ಬಳಿ ಪರಿಹಾರ ಹಣ ತನ್ನಿ
ಒಬ್ಬರು ಹುಬ್ಬಳ್ಳಿಯಲ್ಲಿ, ಇನ್ನೊಬ್ಬರು ಬೆಂಗಳೂರಿನಲ್ಲಿ ಕುಳಿತು ಏನ್ ಮಾಡುತ್ತಿದ್ದೀರಿ. ಕರ್ನಾಟಕಕ್ಕೆ 10 ಸಾವಿರ ಕೋಟಿ ತನ್ನಿ ಹೋಗಿ. ಇಲ್ಲೆ ಕುಳಿತು ಯಾರ್ಯಾರಿಗೋ ದೇಶದ್ರೋಹಿ ಎಂದು ಟೀಕೆ ಮಾಡ್ತೀರಿ ಎಂದು ಕೆಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಸದಾನಂದಗೌಡ ವಿರುದ್ಧ ಹರಿಹಾಯ್ದರು
ಹುಡುಗಾಟಿಕೆ ಹಚ್ಚಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡ ಯತ್ನಾಳ್, ಸಂಸದರಾಗಿ ಕಥೆ ಹೇಳ್ತಿದ್ದೀರಿ. ಹೇಳೋರು ಕೇಳೋರು ಇಲ್ಲವೇ ನಿಮಗೆ ಎಂದು ಕಟುವಾಗಿ ಹೇಳಿದರು.
ನೆರೆ ಪರಿಹಾರ ಕೇಳಿದ್ರೆ ಮೋದಿ ಸರ್ಕಾರ ಬೇಕೆಂದು ಓಟು ಹಾಕಿದ್ದೀರಿ, ಸ್ವಲ್ಪ ಕಾಯಿರಿ ಎಂದ ಬಿಜೆಪಿ MP
ಸಂತ್ರಸ್ತರ ಪರಿಸ್ಥಿತಿ ನರಕ ಸದೃಶ್ಯವಾಗಿದ್ದು, ಪ್ರಧಾನಿಗಳ ಮೇಲೆ ಒತ್ತಡ ತರಲೆಬೇಕು. ಇಲ್ಲಿ ಯಾರಿಗು ಅಂಜಿ ಜೀವನ ಮಾಡಬೇಕಿಲ್ಲ. ನಾವು ಸಂತ್ರಸ್ತರ ಹಿತ ಕಾಯಬೇಕಿದೆ. ನಾವು ಪ್ರಧಾನಿಗಳಿಗೆ ಭಯ ಪಡುವ ಅವಶ್ಯಕತೆ ಇಲ್ಲ ಎಂದು ರಾಜ್ಯದ ಬಿಜೆಪಿ ಸಂಸದರಿಗೆ ಸಲಹೆ ನೀಡಿದರು.
ನಾನು ಆಲಮಟ್ಟಿ ಡ್ಯಾಂ ವಿಚಾರದಲ್ಲಿ ಹಿಂದೆ ಪ್ರಧಾನಿ ಅಟಲ್ ಬಿಹಾರಿ ವಿರುದ್ಧ ಮಾತನಾಡಿದ್ದೇ. ಮುಂದೇ ಕೇಂದ್ರ ಮಂತ್ರಿಯಾದೆ. ಜನರು ಸಂಕಷ್ಟದಲ್ಲಿದ್ದಾಗ ಮಾತನಾಡಿದರೆ ತಪ್ಪಲ್ಲ. ಮಂತ್ರಿ ಸ್ಥಾನ, ಮುಂದಿನ ಟಿಕೇಟ್ ಗಾಗಿ ಜನರ ಹಿತ ಕಾಯುವುದರಿಂದ ದೂರ ಉಳಿಯಬಾರದು ಎಂದರು.
ನಾನು ಪ್ರಧಾನಿ ಭೇಟಿಗೆ ಸಿದ್ಧ
ನಾನು ಪ್ರಧಾನಿ ಭೇಟಿಗೆ ನಾನು ಸಿದ್ಧವಿದ್ದು, ಇಂದೇ ಪ್ರಧಾನಿಗಳಿಗೆ ಭೇಟಿಗೆ ಅವಕಾಶಕೋರಿ ಪತ್ರ ಬರೆಯುತ್ತೇನೆ. ಅನುಮತಿ ಕೊಟ್ಟರೇ ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರಧಾನಿ ಗಮನ ಸೆಳೆಯುತ್ತೇನೆ. ನನ್ನ ಜೊತೆಗೆ ಉತ್ತರ ಕರ್ನಾಟಕದಿಂದ ಬರುವವರು ಬರಲಿ, ಬೇಡವಾದ್ರೆ ಬಿಡಲಿ, ನಾನೊಬ್ಬ ಅಂತು ಹೋಗ್ತೀನಿ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.
ಕರ್ನಾಟಕದ ಮೇಲೇಕೆ ಕೋಪ? ಪಿಎಂ ಮೌನಕ್ಕೆ ಹತ್ತಾರು ವ್ಯಾಖ್ಯಾನಗಳು!
ಕೇಂದ್ರಕ್ಕೆ ನಿಯೋಗ ವಿಚಾರ.; ಅನಂತಕುಮಾರ್ ಜಾಗದಲ್ಲಿ ಈಗ ಪ್ರಹ್ಲಾದ ಜೋಶಿ ಇದ್ದಾರೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದ್ದು, ಪ್ರಹ್ಲಾದ್ ಜೋಶಿಯವರು ಕರ್ನಾಟಕದ ಕೇರ್ ಟೇಕರ್. ಹೀಗಾಗಿ ಜೋಶಿ ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾವು ಬೋಗಿಗಳು ಅವರ ಬೆನ್ನು ಹತ್ತುತ್ತೇವೆ ಎಂದು ತಿಳಿಸಿದರು.
ಉದ್ದೇಶ ಇಟ್ಟುಕೊಂಡು ಯತ್ನಾಳ ಪಕ್ಷದ ವಿರುದ್ಧ ಮಾತನಾಡ್ತಾರೆ ಎನ್ನುವ ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ನಾನೇ ಮಂತ್ರಿಯಾಗಬೇಕು ಅಂತ ನಾನು ಯಾರ ಕಾಲು ಹಿಡಿದಿಲ್ಲ. ಇದೆ ಖಾತೆ ಬೇಕು ಅಂತ ಸರ್ಕಾರಿ ಕಾರು ಬಿಟ್ಟು ಓಡಿ ಮನೆಗೆ ಹೋಗಿ ಮಕ್ಕೊಂಡಿಲ್ಲ. ಅರ್ಹತೆ ಇದ್ರೆ ಸಚಿವ ಸ್ಥಾನ ನೀಡ್ತಾರೆ. ವಾಜಪೇಯಿವರು ಅರ್ಹತೆಯಿಂದಲೇ ನನ್ನ ಮಂತ್ರಿ ಮಾಡಿದ್ದರು ಎಂದು ಹೇಳುವ ಮೂಲಕ ರವಿಗೆ ಟಾಂಗ್ ಕೊಟ್ಟರು.