Asianet Suvarna News Asianet Suvarna News

ವಿಜಯ್ ಮಲ್ಯ ಭಾರತಕ್ಕೆ ವಾಪಸ್?

ಸಾವಿರಾರು ಕೋಟಿ ಸಾಲ ಮಾಡಿಕೊಂಡು ಭಾರತ ಬಿಟ್ಟು ಪರಾರಿಯಾಗಿದ್ದ ವಿಜಯ್ ಮಲ್ಯ ಇದೀಗ ಮತ್ತೆ ಭಾರತಕ್ಕೆ ಮರಳುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಮಲ್ಯ ಅವರೇ ಭಾರತಕ್ಕೆ ಮರಳುವ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

Vijay Mallya may be in talks to return to India
Author
Bengaluru, First Published Jul 25, 2018, 7:58 AM IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರು. ವಂಚಿಸಿ, ಲಂಡನ್‌ಗೆ ಪರಾರಿಯಾಗಿ ಅಲ್ಲಿಂದಲೇ ಭಾರತದ ತನಿಖಾ ಸಂಸ್ಥೆಗಳು ಮತ್ತು ಭಾರತದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಕುಹಕವಾಡಿದ್ದ ಉದ್ಯಮಿ ವಿಜಯ್ ಮಲ್ಯ ಕೊನೆಗೂ ಭಾರತಕ್ಕೆ ಮರಳುವ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಾಗೆಂದು ಬ್ಯಾಂಕಿಂಗ್ ವಂಚನೆ ಕೇಸಲ್ಲಿ ತನಗೆ ಗೆಲುವು ಸಿಗಬಹುದು ಎಂಬ ನಂಬಿಕೆಯಲ್ಲಿ ಭಾರತಕ್ಕೆ ಮರಳಲು ಮಲ್ಯ ಮುಂದಾಗಿಲ್ಲ. 

ಬದಲಾಗಿ ಭಾರತ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಕಠಿಣ ಕಾನೂನಿಂದಾಗಿ ತನ್ನ ಅಷ್ಟೂ ಆಸ್ತಿ ಕೈತಪ್ಪಬಹುದು ಎಂಬ ಭೀತಿಯಿಂದಾಗಿ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ವಾಸ್ತವವಾಗಿ ಮಲ್ಯ ಮಾಡಿದ್ದ ಸಾಲ ಮತ್ತು ಅದಕ್ಕೆ ಬಡ್ಡಿ ಸೇರಿ 9990 ಕೋಟಿ ರು. ತಲುಪಿದೆ. ಆದರೆ ಭಾರತದಲ್ಲಿ ಮಲ್ಯಗೆ ಸೇರಿದ ಅಂದಾಜು 12500 ಕೋಟಿ ರು.ಮೌಲ್ಯದ ಆಸ್ತಿ ಇದೆ. ಎಲ್ಲಾ ಆಸ್ತಿ ಜಪ್ತಿಯಾದರೆ ಸಾಲಕ್ಕಿಂತ ಹೆಚ್ಚಿನ ಪ್ರಮಾಣದ ಅಂದರೆ ಸುಮಾರು 2500 ಕೋಟಿ ರು. ಆಸ್ತಿ ತಪ್ಪುವ ಭೀತಿ ಮಲ್ಯಗೆ ಇದೀಗ ಎದುರಾಗಿದೆ. 

ಹೀಗಾಗಿಯೇ, ಭಾರತಕ್ಕೆ ಆಗಮಿಸಿ ಕಾನೂನು ಹೋರಾಟ ನಡೆಸಲು ತಾವು ಸಿದ್ಧ ಎಂಬ ಸುಳಿವನ್ನು ಭಾರತೀಯ ತನಿಖಾ ಸಂಸ್ಥೆಗಳಿಗೆ ಮಲ್ಯರಿಂದ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಕಠಿಣ ಕಾನೂನಿನ ಭೀತಿ: ಕೋರ್ಟ್ ಮಲ್ಯಗೆ ಆ.27 ರಂದು ತನ್ನ ಮುಂದೆ ಹಾಜರಾಗುವಂತೆ ಸೂಚಿಸಿದೆ.

ಈ ಕಾಯ್ದೆಯ ಅನ್ವಯ, ಒಂದು ವೇಳೆ ಯಾವುದೇ ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗದೇ ಇದ್ದಲ್ಲಿ ಅಥವಾ ಸಮನ್ಸ್‌ಗೆ ಉತ್ತರಿಸದೇ ಹೋದಲ್ಲಿ ಅಂಥವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಒಂದು ವೇಳೆ ತಾನೇನಾದರೂ ಮುಂಬೈ ಕೋರ್ಟ್ ಮುಂದೆ ಹಾಜರಾಗದೇ ಹೋದಲ್ಲಿ, 12500 ಕೋಟಿ ರು. ಮೌಲ್ಯದ ತನ್ನ ಅಷ್ಟೂ ಆಸ್ತಿ ಸರ್ಕಾರ ಮುಟ್ಟು ಗೋಲುಹಾಕಿಕೊಳ್ಳಲಿದೆ ಎಂಬ ಭೀತಿ ಮಲ್ಯರನ್ನು ಕಾಡತೊಡಗಿದೆ.

Follow Us:
Download App:
  • android
  • ios