ನವದೆಹಲಿ[ಫೆ.11]: ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಸಾಕಷ್ಟುಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದರೂ, ತಮ್ಮ ಸಮೂಹದ ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿದ್ದ 3847.45 ಕೋಟಿ ರು.ಗಳನ್ನು ಉದ್ಯಮಿ ವಿಜಯ್‌ ಮಲ್ಯ ಹಾಗೂ ಯುಬಿ ಹೋಲ್ಡಿಂಗ್‌ ಕಂಪನಿ ಬಿಚ್ಚಿರಲಿಲ್ಲ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಇದೇ ವೇಳೆ ಮಲ್ಯ ಅವರ ಬಳಿ 1653 ಕೋಟಿ ರು. ಮೌಲ್ಯದ ಷೇರುಗಳು ಇದ್ದು, ಅದನ್ನು ಮಾರಾಟ ಮಾಡಲು ತನಿಖಾಧಿಕಾರಿಗಳಿಗೆ ಆಗುತ್ತಿಲ್ಲ ಎಂಬ ವಿಚಾರವೂ ಬಯಲಾಗಿದೆ.

2016ರ ಆ.12ಕ್ಕೆ ಅನುಗುಣವಾಗಿ ಯುಬಿ ಸಮೂಹದ ಕಂಪನಿಗಳಲ್ಲಿ 1773.49 ಕೋಟಿ ರು. ಮೌಲ್ಯದ ಷೇರುಗಳನ್ನು ಮಲ್ಯ ಹೊಂದಿದ್ದರು. ಆ ಪೈಕಿ 1653 ಕೋಟಿ ರು. ಮೌಲ್ಯದ ಷೇರುಗಳನ್ನು ಯುಟಿಇ ಇನ್‌ವೆಸ್ಟರ್‌ ಸವೀರ್‍ಸಸ್‌ ಕಂಪನಿಯಲ್ಲಿ ಒತ್ತೆ ಇಟ್ಟಿದ್ದರು. ಈಗಾಗಲೇ ಅದಕ್ಕೆ ಹಣವನ್ನೂ ಪಾವತಿಸಿದ್ದಾರೆ. ಆದರೆ ಷೇರುಗಳನ್ನು ಬಿಡಿಸಿಕೊಂಡಿಲ್ಲ. ಆ ಷೇರುಗಳು ಮಲ್ಯ ಕೈಗೆ ಬರುವವರೆಗೂ ಮುಟ್ಟುಗೋಲು ಹಾಕಿಕೊಳ್ಳಲು ತನಿಖಾಧಿಕಾರಿಗಳಿಗೆ ಆಗುವುದಿಲ್ಲ ಎನ್ನಲಾಗಿದೆ.

ಬ್ಯಾಂಕುಗಳಿಂದ ಸಾಲ ಮಾಡಿ ಪರಾರಿಯಾಗಿರುವ ವಿಜಯ್‌ ಮಲ್ಯ ಅವರಿಗೆ ನಿಜವಾಗಿಯೂ ಸಾಲ ತೀರಿಸುವ ಉದ್ದೇಶ ಇರಲಿಲ್ಲ. ಅದಕ್ಕೇ ಷೇರುಗಳನ್ನು ಅವರು ಸಾಲ ತೀರಿಸಲು ಬಳಸದೇ ಸುರಕ್ಷಿತವಾಗಿ ಇಟ್ಟುಕೊಂಡಿರುವುದೇ ಉದಾಹರಣೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೂರಿದ್ದಾರೆ.