ನವದೆಹಲಿ[ಸೆ.29]: ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಹಾಧಿವೇಶನದ ವೇಳೆ ಪಾಕಿಸ್ತಾನದ ಹೆಸರು ಹೇಳದೆಯೇ ಆ ದೇಶ ಉಗ್ರವಾದಕ್ಕೆ ನೀಡುತ್ತಿರುವ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿ ಬಯಲಿಗೆಳೆದಿದ್ದರೆ, ಬಳಿಕ ಭಾರತೀಯ ವಿದೇಶಾಂಗ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು, ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಪಾಕಿಸ್ತಾನದ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟುಹರಾಜು ಹಾಕಿದ್ದಾರೆ.

ಮೋದಿ ಭಾಷಣದ ಬಳಿಕ ಮಾತನಾಡಿದ್ದ ಇಮ್ರಾನ್‌, ಭಾರತದ ವಿರುದ್ಧ ಹಲವು ಆರೋಪ ಮಾಡಿದ್ದರು. ಬಳಿಕ ಪಾಕ್‌ ಆರೋಪಗಳಿಗೆ ಪ್ರತ್ಯುತ್ತರ ನೀಡುವ ಭಾರತದ ಅಧಿಕಾರದ ಭಾಗವಾಗಿ ಮಾತನಾಡಿದ ಭಾರತದ ವಿದೇಶಾಂಗ ಇಲಾಖೆಯ ಮಹಿಳಾ ಅಧಿಕಾರಿ ವಿದಿಶಾ ಮೈತ್ರಾ ಅವರು ಪಾಕಿಸ್ತಾನ ಭಯೋತ್ಪಾದನೆಯ ಉಗಮ ಸ್ಥಾನ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಆ ದೇಶದ ಮಾನ ಹರಾಜು ಹಾಕಿದ್ದಾರೆ. ಈ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

"

ವಿದಿಶಾ ಮಾತನಾಡಿದ್ದೇನು?:

* ಬಹಳ ಹಿಂದಿನಿಂದಲೂ ಭಯೋತ್ಪಾದಕರಿಗೆ ಪಾಕಿಸ್ತಾನ ಕೃಪಾಪೋಷಣೆ ಇದೆ.

* ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರರು ಎಂದು ಕುಖ್ಯಾತಿಗೊಳಗಾದ 130 ಉಗ್ರರು ಹಾಗೂ ವಿಶ್ವಸಂಸ್ಥೆಯಲ್ಲಿ ಪಟ್ಟಿಮಾಡಲಾದ 25 ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಆಶ್ರಯ ಕಲ್ಪಿಸಿಲ್ಲವೇ ಎಂಬ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಖಚಿತಪಡಿಸಲಿ.

* ಎಫ್‌ಎಟಿಎಫ್‌ನ 27 ಮಾನದಂಡಗಳ ಪೈಕಿ 20ಕ್ಕೂ ಹೆಚ್ಚು ಮಾನದಂಡಗಳನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂಬುದನ್ನು ಪಾಕಿಸ್ತಾನ ನಿರಾಕರಿಸುತ್ತದೆಯೇ?

* ಅಮೆರಿಕದ ಭದ್ರತಾ ಪಡೆಗಳಿಂದ ಹತ್ಯೆಗೀಡಾದ ಉಗ್ರ ಒಸಮಾ ಬಿನ್‌ ಲ್ಯಾಡೆನ್‌ನನ್ನು ಬಹಿರಂಗವಾಗಿ ನೀವೇ ಸಮರ್ಥಿಸಿಕೊಂಡಿದ್ದನ್ನು ನ್ಯೂಯಾರ್ಕ್ ನಗರದ ಮುಂದೆ ಅಲ್ಲಗೆಳೆಯುವಿರಾ?

* ವಿಶ್ವಸಂಸ್ಥೆಯಿಂದ ನಿಷೇಧಕ್ಕೊಳಗಾದ ಅಲ್‌ಖೈದಾ ಹಾಗೂ ಡಾಯಿಶ್‌ ಉಗ್ರ ಸಂಘಟನೆಯ ಭಯೋತ್ಪಾದಕರಿಗೆ ಪಿಂಚಣಿ ನೀಡುತ್ತಿರುವ ವಿಶ್ವದ ಪ್ರಥಮ ರಾಷ್ಟ್ರ ಎಂಬುದನ್ನು ಪಾಕಿಸ್ತಾನ ಎಂಬುದನ್ನು ಒಪ್ಪಿಕೊಳ್ಳುತ್ತದೆಯೇ ಮತ್ತು ಮುಂದಿನ ದಿನಗಳಲ್ಲೂ ಇದೇ ನೀತಿ ಮುಂದುವರಿಸುತ್ತದೆಯೇ?

* 1947ರಲ್ಲಿ ಪಾಕಿಸ್ತಾನದಲ್ಲಿ ಹಿಂದು, ಕ್ರಿಶ್ಚಿಯನ್‌, ಸಿಖ್‌, ಶಿಯಾ, ಪಷ್ಟುನ್ಸ್‌, ಸಿಂಧಿ, ಬಲೋಚ್‌ ಸೇರಿ ಒಟ್ಟಾರೆ ಶೇ.23ರಷ್ಟುಪ್ರಮಾಣದ ಅಲ್ಪಸಂಖ್ಯಾತರಿದ್ದರು. ಆದರೆ, ಪಾಕ್‌ ಕೈಗೊಂಡ ಕಠಿಣ ಧರ್ಮ ನಿಂದನೆ ಕಾನೂನುಗಳು, ವ್ಯವಸ್ಥಿತವಾದ ಕ್ರಮಗಳು, ದುರುಪಯೋಗ ಹಾಗೂ ಬಲವಂತದ ಧರ್ಮ ಪರಿವರ್ತನೆಯಿಂದಾಗಿ ಪಾಕಿಸ್ತಾನದಲ್ಲಿ ಇದೀಗ ಅಲ್ಪಸಂಖ್ಯಾತರ ಪ್ರಮಾಣ ಶೇ.3ಕ್ಕೆ ಕುಸಿದಿದೆ.

* ಜಂಟಲ್‌ಮನ್‌ ಗೇಮ್‌ ಎಂದೇ ಖ್ಯಾತವಾಗಿದ್ದ ಕ್ರಿಕೆಟ್‌ನಲ್ಲಿದ್ದ ಇಮ್ರಾನ್‌ ಖಾನ್‌ ಅವರ ಇಂದಿನ(ಶುಕ್ರವಾರ) ಭಾಷಣವು ಡೇರಾ ಆ್ಯಡಂ ಖೇಲ್‌ ಬಂಧೂಕುಗಳನ್ನು ಪ್ರತಿಧ್ವನಿಸುತ್ತಿರುವಂತಿದೆ. ಡೇರಾ ಆ್ಯಡಂ ಖೇಲ್‌ ಎಂಬುದು ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಕೊಹತ್‌ ಮತ್ತು ಪೇಶಾವರದ ನಡುವೆ ಇರುವ ಒಂದು ಪಟ್ಟಣವಾಗಿದ್ದು, ಯುದ್ಧ ಶಸ್ತ್ರಾಸ್ತ್ರಗಳು, ಶಸ್ತ್ರಾಸ್ತ್ರಗಳ ಮಾರಾಟಗಾರರು ಹಾಗೂ ಸೇನಾ ಪರಿಕರಗಳ ಉತ್ಪಾದನಾ ಘಟಕಗಳನ್ನು ಹೊಂದಿದ ಪಟ್ಟಣವಾಗಿದೆ ಎಂದು ವಿದಿಶಾ ಹೇಳಿದರು.