ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ವಿಧಾನಸೌಧ ಮದುವಣಗಿತ್ತಿಯಂತೆ ಸಜ್ಜುಗೊಂಡಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಪ್ರಧಾನ ಭಾಷಣ ಸಮಾರಂಭದ ಕೇಂದ್ರಬಿಂದುವಾಗಿದ್ದು, ವಜ್ರಮಹೋತ್ಸವದ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.
ಬೆಂಗಳೂರು (ಅ.24): ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ವಿಧಾನಸೌಧ ಮದುವಣಗಿತ್ತಿಯಂತೆ ಸಜ್ಜುಗೊಂಡಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಪ್ರಧಾನ ಭಾಷಣ ಸಮಾರಂಭದ ಕೇಂದ್ರಬಿಂದುವಾಗಿದ್ದು, ವಜ್ರಮಹೋತ್ಸವದ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.
ಚರ್ಚೆ, ವಿವಾದದ ನಂತರ ಕಡೆಗೂ ವಿಧಾನಸೌಧದ ವಜ್ರ ಮಹೋತ್ಸವಕ್ಕೆ ಸಕಲ ಸಿದ್ದತೆಗಳು ಪೂರ್ಣಗೊಂಡಿದೆ. ಎಲ್ಲ ವಿವಾದಗಳ ನಡುವೆಯೇ ಶಕ್ತಿ ಕೇಂದ್ರ ವಿಧಾನಸೌಧದ 60 ನೇ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ವಜ್ರ ಮಹೋತ್ವಸ ಆಚರಣೆ ಭಾಗವಾಗಿ ನಾಳೆ ಬೆಳಿಗ್ಗೆ 11 ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಧಾನಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಒಂದೆಡೆ ವಿಶೇಷ ಅಧಿವೇಶನಕ್ಕೆ ವಿಧಾನಸಭೆ ಸಭಾಂಗಣದಲ್ಲಿ ತಯಾರಿ ನಡೆದಿದ್ದರೆ, ಮತ್ತೊಂದೆಡೆ ವಜ್ರ ಮಹೋತ್ಸವಕ್ಕಾಗಿ ವಿಧಾನಸೌದದ ಕಟ್ಟಡ, ಬೃಹತ್ ಮೆಟ್ಟಿಲು, ಬ್ಯಾಂಕ್ವೆಟ್ ಹಾಲ್ ಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ನಡೆದಿವೆ. ವಜ್ರ ಮಹೋತ್ಸವ ಅಂಗವಾಗಿ ಮಧ್ಯಾಹ್ನ ಊಟದ ಬಳಿಗ 3 ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶನಗೊಳ್ಳಲಿವೆ. ಟಿ.ಎನ್. ಸೀತಾರಾಮ್, ಗಿರೀಶ್ ಕಾಸರವಳ್ಳಿ ಸಿದ್ಧಪಡಿಸಿರುವ ಸಾಕ್ಷ್ಯ ಚಿತ್ರಗಳನ್ನು ಪ್ರಸಾರಗೊಳ್ಳಲಿವೆ. ಮಾಸ್ಟರ್ ಕಿಶನ್ ನಿರ್ದೇಶನದ 3ಡಿ ವರ್ಚುಯಲ್ ರಿಯಾಲಿಟಿ ವಿಡಿಯೋ ಪ್ರದರ್ಶನ ಮಧ್ಯಾಹ್ನ 3 ಗಂಟೆಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ.
ಸಂಜೆ ವೇಳೆಗೆ ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿಧಾನಸೌಧ ನಿರ್ಮಾಣಕ್ಕೆ ಪ್ರಧಾನಿ ದಿ.ಜವಾಹರಲಾಲ್ ನೆಹರು ಅವರಿಂದ ಅಡಿಗಲ್ಲು ಹಾಕಿಸಿದ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ, ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಿದೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಈ ಮೂರು ಮಾಜಿ ಸಿಎಂಗಳ ಕುಟುಂಬದವರು ಗೌರವ ಸ್ವೀಕರಿಸಲಿದ್ದಾರೆ. ಒಟ್ಟಾರೆ, ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.
