ಬೆಂಗಳೂರು :  ‘ನನಗೆ ಪತಿ ಇಲ್ಲ. ಮೂತ್ರಪಿಂಡ ದಾನ ಮಾಡಿ ಬಂದ ಹಣವನ್ನು ‘ಐಎಂಎ’ ಕಂಪನಿಯಲ್ಲಿ ಹೂಡಿಕೆ ಮಾಡಿ ಕೈಸುಟ್ಟುಕೊಂಡೆ..!’

ಹೀಗೆ ಶಿವಾಜಿನಗರ ಲೇಡಿ ಕರ್ಜನ್‌ ರಸ್ತೆಯಲ್ಲಿರುವ ‘ಐಎಂಎ’ ಕಚೇರಿ ಎದುರು ಆರ್‌.ಟಿ.ನಗರ ನಿವಾಸಿ ಫರೀದ ಬೇಗ್‌ (49) ಎಂಬುವವರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಫರೀದಾ ಬೇಗ್‌ ಅವರು ಇಬ್ಬರು ಹೆಣ್ಣು ಮಕ್ಕಳು ಹಾಗೂ ಪುತ್ರನ ಜತೆ ಆರ್‌.ಟಿ.ನಗರದಲ್ಲಿ ನೆಲೆಸಿದ್ದಾರೆ. ಫರೀದ ಅವರು ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪುತ್ರ ಗ್ಯಾರೇಜ್‌ ಕೆಲಸಕ್ಕೆ ಹೋಗುತ್ತಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ವ್ಯಾಸಂಗ ಮಾಡುತ್ತಿದ್ದಾರೆ. ಈ ನಡುವೆ ನಾಲ್ಕು ವರ್ಷಗಳ ಹಿಂದೆ ಫರೀದ ಅವರ ಪತಿ ನಿಧನ ಹೊಂದಿದ್ದರು. 

ನೆರವು ನೀಡುತ್ತಿದ್ದ ಕುಟುಂಬದ ಮಹಿಳೆ ಎರಡು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಫರೀದ ಅವರು ತಾವೇ ಸ್ವತಃ ಮಹಿಳೆಗೆ ಒಂದು ಮೂತ್ರಪಿಂಡವನ್ನು ದಾನ ಮಾಡಿದ್ದರು. ಇದಕ್ಕೆ ಪ್ರತಿಫಲವಾಗಿ ಮೂತ್ರಪಿಂಡ ಪಡೆದ ಮಹಿಳೆ ಕುಟುಂಬ ಫರೀದ ಅವರಿಗೆ ಮೂರು ಲಕ್ಷ ರು. ನೀಡಿತ್ತು.

ಠೇವಣಿ ಇಟ್ಟಿದ್ದ ಹಣವನ್ನು ಒಂದೂವರೆ ವರ್ಷದ ಹಿಂದೆ ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದೆ. ಇದೀಗ ಏಕಾಏಕಿ ಸಂಸ್ಥೆಯ ಮಾಲೀಕ ವಂಚನೆ ಮಾಡಿ ಪರಾರಿಯಾಗಿದ್ದಾನೆ. ಹಣ ಕಳೆದುಕೊಂಡ ನಾವು ಏನು ಮಾಡುವುದು ಎಂದು ಫರೀದ ಕಣ್ಣೀರಿಡುತ್ತಿದ್ದರೆ, ಅವರನ್ನು ಪುತ್ರಿ ಸಮಾಧಾನ ಮಾಡುತ್ತಿದ್ದ ದೃಶ್ಯ ಸ್ಥಳದಲ್ಲಿದ್ದವರ ಕಣ್ಣಿನಲ್ಲಿ ನೀರು ತರಿಸಿತ್ತು.