ಬೆಂಗಳೂರು (ನ.27): ವಿಶ್ವ ಹಿಂದು ಪರಿಷದ್ ಮತ್ತು ಶಿವಸೇನೆ ಆಯೋಜಿಸಿದ್ದ ಧರ್ಮ ಸಭಾದಲ್ಲಿ ಲಕ್ಷಾಂತರ ಜನರು ಸೇರಿದ್ದರು ಎಂಬ ಒಕ್ಕಣೆಯೊಂದಿಗಿನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಿಕ್ಕಿರಿದು ಸೇರಿರುವ ಜನರ ಫೋಟೋವನ್ನು ಪೋಸ್ಟ್ ಮಾಡಿ ‘ಅಯೋಧ್ಯೆಯ ಗಲ್ಲಿ ಗಲ್ಲಿಯೂ ಸಾಧು, ಸಂತರು ಕಾರ್ಯಕರ್ತರಿಂದ ತುಂಬಿತ್ತು. ದೇಶದ ನಾನಾ ಭಾಗಗಳಿಂದ ಕಾರ್ಯಕರ್ತರು ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸಿ ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದರು’ ಎಂದು ಒಕ್ಕಣೆ ಬರೆಯಲಾಗಿತ್ತು.  ಸದ್ಯ ಈ ಫೋಟೋ ಭಾರಿ ವೈರಲ್ ಆಗಿದೆ. ಈ ಫೋಟೋವನ್ನು ಕರ್ನಾಟಕ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹ ‘ಇದಕ್ಕೆ ಶೀರ್ಷಿಕೆ ಅಗತ್ಯವಿಲ್ಲ’ ಎಂದು ಬರೆದು ಶೇರ್ ಮಾಡಿದ್ದಾರೆ.

 

ಆದರೆ ನಿಜಕ್ಕೂ ಧರ್ಮಸಭೆಯಲ್ಲಿ ಇಷ್ಟೊಂದು ಜನರು ಸೇರಿದ್ದರೇ ಎಂದು ಪರಿಶೀಲಿಸಿದಾಗ, ಇದೊಂದು ದಾರಿತಪ್ಪಿಸುವ ಫೋಟೋ ಎಂಬುದು ಬಯಲಾಗಿದೆ. ವಾಸ್ತವವಾಗಿ ಈ ಫೋಟೋ ಉತ್ತರ ಪ್ರದೇಶ ಅಥವಾ ರಾಮಮಂದಿರ ವಿಷಯಕ್ಕೆ ಸಂಬಂಧಪಟ್ಟಿದ್ದೇ ಅಲ್ಲ. ಈ ಫೋಟೋವನ್ನು ಮೊಟ್ಟಮೊದಲಿಗೆ ಟ್ವೀಟ್ ಮಾಡಿದ್ದು 2016 ರಲ್ಲಿ ಮರಾಠ ಕ್ರಾಂತಿ ಮೋರ್ಚಾ. ಆಗ ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮರಾಠರಿಗೆ ಮೀಸಲಾತಿಗೆ ಆಗ್ರಹಿಸಿ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಬಂದ ಜನರು ಮುಂಬೈವರೆಗೂ ನಡೆದು ಪ್ರತಿಭಟನೆ ನಡೆಸಿದ್ದರು.

ಇದನ್ನು ಹಲವಾರು ಮಾಧ್ಯಮಗಳೂ ವರದಿ ಮಾಡಿದ್ದವು. ಸದ್ಯ ಅದೇ ಚಿತ್ರವನ್ನು ಬಳಸಿಕೊಂಡು ಭಾನುವಾರ ಅಯೋಧ್ಯೆಯಲ್ಲಿ ನಡೆದ ಧರ್ಮ ಸಭಾಗೆ ಸೇರಿದ್ದ ಲಕ್ಷಾಂತರ ಜನ ಎಂದು ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.

- ವೈರಲ್ ಚೆಕ್