ತಾಜ್ ಮಹಲ್ ಪ್ರವೇಶ ದ್ವಾರ ಒಡೆದ ವಿಹೆಚ್‌ಪಿ ಕಾರ್ಯಕರ್ತರು..!

VHP Members Damage Taj Mahal Gate
Highlights

ತಾಜ್ ಮಹಲ್‌ನ ಪಶ್ಚಿಮ ದ್ವಾರ ಒಡೆದ ವಿಹೆಚ್‌ಪಿ ಕಾರ್ಯಕರ್ತರು

ಶಿವ ದೇಗುಲಕ್ಕೆ ಹೋಗಲು ಅಡ್ಡಿ ಎಂಬ ಕಾರಣಕ್ಕೆ ದ್ವಾರ ಧ್ವಂಸ

ಪ್ರವೇಶ ದ್ವಾರ ಒಡೆಯುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆ

ವಿಹೆಚ್‌ಪಿ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲು 
 

ಆಗ್ರಾ(ಜೂ.13): ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಗುಂಪೊಂದು ಕಳೆದ ಭಾನುವಾರ ತಾಜ್ ಮಹಲ್‌ನ ಪಶ್ಚಿಮ ದ್ವಾರವನ್ನು ಧ್ವಂಸಗೊಳಿಸಿದೆ. ತಾಜ್ ಮಹಲ್‌ನ ಪಶ್ಚಿಮ ದ್ವಾರವನ್ನು ಕಿತ್ತೆಸೆದ ಕಾರ್ಯಕರ್ತರ ವಿರುದ್ಧ ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಆಗ್ರಾ ಪೋಲೀಸರಿಗೆ ದೂರು ನೀಡಿದೆ.

ತಾಜ್ ಮಹಲ್‌ನ ನಿರ್ಬಂಧಿತ ಪ್ರದೇಶದಲ್ಲಿ 400 ವರ್ಷಗಳಷ್ಟು ಹಳೆಯದಾದ ಶಿವ ದೇಗುಲಕ್ಕೆ ಹೋಗುವ ಮಾರ್ಗವಿದೆ. ಈ ಮಾರ್ಗಕ್ಕೆ ಭವ್ಯ ಸೌಧದ ಆವರಣ ಅಡ್ಡಿಯಾಗಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ತಾಜ್ ಆವರಣದಲ್ಲಿ ದಾಂಧಲೆ ನಡೆಸಿದ್ದಾರೆ. ತಾಜ್ ಮಹಲ್ ಪಶ್ಚಿಮ ಪ್ರವೇಶ ದ್ವಾರವನ್ನು ಧ್ವಂಸಗೊಳಿಸಲು ಪ್ರಯತ್ನಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸುತ್ತಿಗೆ ಮತ್ತು  ಕಬ್ಬಿಣದ ರಾಡ್‌ಗಳನ್ನು ಬಳಸಿ ಬಾಗಿಲಿಗೆ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. 

ಇದೇ ವೇಳೆ ತಾಜ್ ಪಶ್ಚಿಮ ದ್ವಾರದ ನಂತರ ಸಿಗುವ ಬಸಾಯಿ ಘಾಟ್‌ನಲ್ಲಿರುವ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಲು ಇನ್ನೊಂದು ಮಾರ್ಗವಿರುವುದಾಗಿ ಪೋಲೀಸರು ಸ್ಪಷ್ಟಪಡಿಸಿದರೂ ಸಹ  ವಿಎಚ್‍ಪಿ ಸದಸ್ಯರು ದ್ವಾರವನ್ನು ಒಡೆದು ಹಾಕಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಹೆಚ್‌ಪಿ ಕಾರ್ಯಕರ್ತರ ವಿರುದ್ದ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

loader