ಕಳೆದ ವರ್ಷದ ಜ್ಞಾನಪೀಠ ಪ್ರಶಸ್ತಿಯನ್ನು ಗುಜರಾತಿ ಬರಹಗಾರ ರಘುವೀರ್ ಚೌಧರಿ ಅವರಿಗೆ ನೀಡಲಾಗಿತ್ತು.

ನವದೆಹಲಿ(ಡಿ.24):ಬಂಗಾಳಿ ಭಾಷೆಯ ಖ್ಯಾತ ಕವಿ ಮತ್ತು ವಿಮರ್ಶಕ ಶಂಖ ಘೋಷ್ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ 2016ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ಆಯ್ಕೆಗಾಗಿ ಶುಕ್ರವಾರ ನವದೆಹಲಿಯಲ್ಲಿ ಲೇಖಕ ಮತ್ತು ವಿದ್ವಾಂಸ ನಮ್ವರ್ ಸಿಂಗ್ ನೇತೃತ್ವದಲ್ಲಿ ನಡೆದ ಜ್ಞಾನಪೀಠ ಮಂಡಳಿ ಸಭೆಯಲ್ಲಿ ಶಂಖ ಘೋಷ್‌ರನ್ನು 52ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಳೆದ ವರ್ಷದ ಜ್ಞಾನಪೀಠ ಪ್ರಶಸ್ತಿಯನ್ನು ಗುಜರಾತಿ ಬರಹಗಾರ ರಘುವೀರ್ ಚೌಧರಿ ಅವರಿಗೆ ನೀಡಲಾಗಿತ್ತು.

ಕಾವ್ಯಾತ್ಮಕ ನುಡಿಗಟ್ಟು ಮತ್ತು ಸೃಜನಶೀಲ ಕಾವ್ಯ ರಚನೆಯ ವಿವಿಧ ಪ್ರಯೋಗಗಳಿಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಮಂಡಳಿ ತಿಳಿಸಿದೆ. ತಮ್ಮ ಕಾವ್ಯಗಳಲ್ಲಿ ಸಮಾಜ ಮತ್ತು ಅಸ್ತಿತ್ವದ ಟೊಳ್ಳುತನದ ಬಗ್ಗೆ ವಿಡಂಬನಾತ್ಮಕವಾಗಿ ವರ್ಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಎಲ್ಲ ಕೃತಿಗಳು ವಾಸ್ತವ ಸಮಾಜಕ್ಕೆ ಹತ್ತಿರವಾಗಿವೆ. ಹಾಗಾಗಿ ಅವರ ಕೃತಿಗಳು ಹಿಂದಿ, ಮರಾಠಿ, ಅಸ್ಸಾಂ, ಪಂಜಾಬ್, ಮಲಯಾಳಂ ಮತ್ತು ಕೆಲ ವಿದೇಶಿ ಭಾಷೆಗಳಿಗೂ ತರ್ಜುಮೆಯಾಗಿವೆ.

1932ರಲ್ಲಿ ಉತ್ತರ ಪ್ರದೇಶದ ಬಿಜನೂರ್ ಜಿಲ್ಲೆಯ ಚಾಂದ್‌ಪುರದಲ್ಲಿ ಜನಿಸಿದ ಅವರು ಸದ್ಯ ಬಾಂಗ್ಲಾದೇಶದಲ್ಲಿ ನೆಲೆಸಿದ್ದಾರೆ. ಆಧುನಿಕ ಬಂಗಾಳಿ ಸಾಹಿತ್ಯದಲ್ಲಿ ಖ್ಯಾತರಾಗಿರುವ ಅವರು ರವೀಂದ್ರನಾಥ್ ಠಾಗೋರ್ ಸಾಹಿತ್ಯ ಅಧ್ಯಯನದ ಬಗ್ಗೆಯೂ ಸಾಕಷ್ಟು ತಿಳಿದುಕೊಂಡಿದ್ದಾರೆ. ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಂಗಾಳಿ ಸಾಹಿತ್ಯದಲ್ಲಿ ಪದವಿ ಮುಗಿಸಿ ಕಲ್ಕತ್ತಾ ವಿವಿ ಮತ್ತು ಜಾದವ್‌ಪುರ ಮತ್ತು ವಿಶ್ವ ಭಾರತಿ ವಿವಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.