ಇದೀಗಲೂ ಧಾರವಾಡದಿಂದ ಬೆಂಗಳೂರಿಗೆ ಆಗಮಿಸಿದ ಸಿಎಂ ತಮ್ಮ ನಿವಾಸಕ್ಕೂ ತೆರಳದೇ ನೇರವಾಗಿ ಕುಮಾರ ಕೃಪ ಅತಿಥಿ ಗೃಹಕ್ಕೆ ಬಂದರು. ಸಿಎಂ ಬಂದಾಗಲೂ ವೇಣುಗೋಪಾಲ ತಮ್ಮ ಕೋಣೆಯಿಂದ ಹೊರಬರಲಿಲ್ಲ. ಬಳಿಕ ಸಿದ್ದರಾಮಯ್ಯನವರೇ ಅವರ ರೂಮಿಗೆ ತೆರಳಿ ಹೂಗುಚ್ಛ ನೀಡಿದರು.

ಬೆಂಗಳೂರು(ಜೂ.05): ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ ಸ್ವಲ್ಪ ಡಿಫಿರೆಂಟ್ ವ್ಯಕ್ತಿ ಎನ್ನಬಹುದು. ಈ ಹಿಂದಿನ ಉಸ್ತುವಾರಿ ದಿಗ್ವಿಜಯ ಸಿಂಗ್ ಗೂ ಇವರಿಗೂ ಬಹಳ ವ್ಯತ್ಯಾಸಗಳಿವೆ ಅನ್ನೋ ಮಾತು ಕಾಂಗ್ರೆಸ್ ವಲಯದಲ್ಲೇ ಕೇಳಿಬರ್ತಿದೆ‌ ಇದೀಗ ಅದು ಎರಡನೇ ಬಾರಿ ರುಜುವಾತಾಗಿದೆ.

ಜೂನ್ 12 ರಂದು ಎಐಸಿಸಿ ಉಸ್ತುವಾರಿ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದಾರೆ.ಅಂದೇ ನಡೆಯುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ರೀ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಕಾರ್ಯಕ್ರಮದ ರೂಪರೇಷ ಸಿದ್ಧಪಡಿಸುವ ಜವಾಬ್ದಾರಿ ವೇಣುಗೋಪಾಲ ಮೇಲಿದೆ. ಆದ್ದರಿಂದ ವೇಣುಗೋಪಾಲ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಬಗ್ಗೆ ರಾಜ್ಯದ ಹಿರಿಯ ಮುಖಂಡರ ಜೊತೆ ವೇಣುಗೋಪಾಲ ಸಭೆ ನಡೆಸಿದರು. ಸಿಎಂ ಸಿದ್ದರಾಮಯ್ಯ,ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ ಗುಂಡೂರಾವ್, ಎಸ್ ಆರ್ ಪಾಟೀಲ್, ಪಕ್ಷದ ಅಧ್ಯಕ್ಷ‌ ಪರಮೇಶ್ವರ, ಸಭೆಯಲ್ಲಿ ಪಾಲ್ಗೊಂಡಿದ್ದರು.

ಆದರೆ ಈ ಬಾರಿಯೂ ವೇಣುಗೋಪಾಲ ತಾವು ಇದ್ದಲ್ಲಿಗೆ ಮುಖ್ಯಮಂತ್ರಿಯನ್ನು ಕರೆಸಿಕೊಂಡಿದ್ದಾರೆ. ಈ ಹಿಂದೆ ಬೆಂಗಳೂರಿಗೆ ಬಂದು ಎರಡು ದಿನವಾದರೂ ಮುಖ್ಯಮಂತ್ರಿಯನ್ನು ವೇಣುಗೋಪಾಲ ಮೀಟ್ ಮಾಡಿರಲಿಲ್ಲ. ಆಗ ಖುದ್ದು ಸಿಎಂ ಭೇಟಿ ಮಾಡಿದರು. ಇದೀಗಲೂ ಧಾರವಾಡದಿಂದ ಬೆಂಗಳೂರಿಗೆ ಆಗಮಿಸಿದ ಸಿಎಂ ತಮ್ಮ ನಿವಾಸಕ್ಕೂ ತೆರಳದೇ ನೇರವಾಗಿ ಕುಮಾರ ಕೃಪ ಅತಿಥಿ ಗೃಹಕ್ಕೆ ಬಂದರು. ಸಿಎಂ ಬಂದಾಗಲೂ ವೇಣುಗೋಪಾಲ ತಮ್ಮ ಕೋಣೆಯಿಂದ ಹೊರಬರಲಿಲ್ಲ. ಬಳಿಕ ಸಿದ್ದರಾಮಯ್ಯನವರೇ ಅವರ ರೂಮಿಗೆ ತೆರಳಿ ಹೂಗುಚ್ಛ ನೀಡಿದರು.

ವೇಣುಗೋಪಾಲ ನಡೆ ಸಿಎಂ ವಿರೋಧಿ ಬಣದಲ್ಲಿ ಸಂತಸ ತಂದಿರಬಹುದು. ಆದರೆ, ಈ ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಸಿದ್ದರಾಮಯ್ಯ ಮತ್ತು ವೇಣುಗೋಪಾಲ ನಡುವೆ ಮನಸ್ತಾಪ ಹೆಚ್ಚುವ ಸಾಧ್ಯತೆಯೂ ಇದೆ. ಈ ಬೆಳವಣಿಗೆ ಪಕ್ಷ ಸಂಘಟನೆ ಮೇಲೂ ಪರಿಣಾಮ ಬೀರಬಹುದಾಗಿದೆ.

ವರದಿ: ಶ್ರೀನಿವಾಸ ಹಳಕಟ್ಟಿ, ಸುವರ್ಣ ನ್ಯೂಸ್