ಮೈಸೂರು[ಜು.14]: ಯಾವುದೇ ಭಾಷೆಯನ್ನು ಅನ್ಯಭಾಷಿಗರ ಮೇಲೆ ಹೇರಬಾರದು. ಅದೇ ರೀತಿಯಲ್ಲಿ ಯಾವುದೇ ಭಾಷಿಗರು ಬೇರೆ ಭಾಷೆಯನ್ನು ವಿರೋಧಿಸಬಾರದು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ.

ನಗರದಲ್ಲಿ ಭಾರತೀಯ ಭಾಷಾ ಸಂಸ್ಥಾನದ ಸ್ವರ್ಣ ಜಯಂತಿ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸಂವಿಧಾನದಡಿ 22 ಭಾಷೆಗಳನ್ನು ರಾಜ್ಯಾಡಳಿತ ಭಾಷೆಗಳೆಂದು ಗುರುತಿಸಲಾಗಿದ್ದು, ಪ್ರತಿಯೊಂದು ಭಾಷೆ ಅದರದ್ದೇ ಆದ ಮಹತ್ವ ಹೊಂದಿದೆ. ಹಿಂದಿ ಅಂದಾಕ್ಷಣ ಸಾರಾಸಗಟಾಗಿ ವಿರೋಧಿಸುವುದು ಸರಿಯಲ್ಲ. ಅದೇ ರೀತಿ ಹಿಂದಿಯನ್ನು ಹೇರಲೂಬಾರದು. ಹಿಂದಿಯನ್ನು ರಾಷ್ಟ್ರದ ಬಹುಪಾಲು ಪ್ರದೇಶದವರು ಮಾತನಾಡುವುದರಿಂದ ಇತರರು ಹಿಂದಿ ಕಲಿಯಲು ಅಡ್ಡಿಯಿಲ್ಲ ಎಂದರು. ಇದೇವೇಳೆ ಎಲ್ಲೇ ಹೋದರೂ ಮಾತೃಭಾಷೆ ಮರೆಯಬಾರದು ಎಂದು ಅಭಿಪ್ರಾಯಪಟ್ಟಅವರು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮಾತೃ ಭಾಷಾ ಮಾಧ್ಯಮದಲ್ಲಿಯೇ ಸಿಗುವಂತೆ ಮಾಡುವ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಚಿಂತಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಇದೇವೇಳೆ ಸರ್ಕಾರಿ ಅಧಿಕಾರಿಗಳು ಹಿಂದಿ ಅಥವಾ ಇಂಗ್ಲಿಷ್‌ಗೆ ಬದಲಾಗಿ ಕನ್ನಡದಲ್ಲಿ ವ್ಯವಹರಿಸಿದಾಗ ಜನರಿಗೆ ಅನುಕೂಲವಾಗುತ್ತದೆ. ಅದೇ ರೀತಿ ಹೈಕೋರ್ಟ್‌ಗಳು ನೀಡುವ ವ್ಯಾಜ್ಯಗಳ ತೀರ್ಪುಗಳು ಸ್ಥಳೀಯ ಭಾಷೆಯಲ್ಲಿದ್ದರೆ ಕಕ್ಷಿದಾರರಿಗೆ ಸರಳವಾಗಿ ಅರ್ಥವಾಗುತ್ತದೆ. ನಾನು ರಾಜ್ಯಸಭೆಯಲ್ಲಿ ಮಾತನಾಡುವ ಸಂಸದರಿಗೆ ತಮ್ಮ ತಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಲು ಅವಕಾಶ ನೀಡುತ್ತೇನೆ. ಅನುವಾದಿಸಿ ನಾನೂ ಕೇಳಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಉಪರಾಷ್ಟ್ರಪತಿಯಾಗುವ ಮೊದಲು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದ ಅವರು ಕನ್ನಡದಲ್ಲೇ ಮಾತು ಪ್ರಾರಂಭಿಸಿದರು. ಭಾಷಣದುದ್ದಕ್ಕೂ ಹಿಂದಿ, ಇಂಗ್ಲಿಷ್‌ ಮತ್ತು ತಮ್ಮ ಮಾತೃಭಾಷೆಯಾದ ತೆಲುಗಿನಲ್ಲಿಯೂ ಉಕ್ತಿಗಳನ್ನು ಉಚ್ಚರಿಸಿ ವಿದ್ಯಾರ್ಥಿಗಳ ಮನಗೆದ್ದರು.