Asianet Suvarna News Asianet Suvarna News

ಕರ್ನಾಟಕ-ತಮಿಳುನಾಡು ವ್ಯಾಪಾರ ವಹಿವಾಟು ಸ್ಥಗಿತ; ನಿತ್ಯ ಸಾವಿರಾರು ಕೋಟಿ ರು.ಗೂ ಅಧಿಕ ನಷ್ಟ

vehicles movement banned at karnataka tamilnadu border

ಬೆಂಗ​ಳೂ​ರು: ಕಾವೇರಿ ವಿವಾದ ಹಿನ್ನೆ​ಲೆ​ಯಲ್ಲಿ ಕರ್ನಾ​ಟ​ಕ-ತಮಿ​ಳು​ನಾಡು ನಡುವೆ ವಾಹನ ಸಂಚಾರ ನಿರ್ಬಂಧ ಹೇರಿ​ರು​ವು​ದ​ರಿಂದ ಉಭಯ ರಾಜ್ಯ​ಗಳ ನಡು​ವಿನ ವ್ಯಾಪಾರ ವಹಿ​ವಾಟು ಸಂಪೂರ್ಣ ಸ್ಥಗಿ​ತ​ವಾ​ಗಿದೆ. ಇದ​ರಿಂದ ಎರಡು ರಾಜ್ಯ​ಗಳ ಸರ್ಕಾರ ಹಾಗೂ ಲಾರಿ ಮಾಲೀ​ಕ​ರಿಗೆ ನಿತ್ಯ ಸಾವಿ​ರಾರು ಕೋಟಿ ರುಪಾಯಿಗೂ ಅಧಿಕ ನಷ್ಟ​ವಾ​ಗಿದೆ.

ಕರ್ನಾಟಕ-ತಮಿಳುನಾಡಿನಿಂದ ಸಾಕಷ್ಟುಸರಕು ಸಾಗಣೆ ವ್ಯವಹಾರ ನಡೆಯುತ್ತದೆ. ನಿತ್ಯ 16 ಸಾವಿರ ವಾಹನಗಳು ಸಂಚ​ರಿ​ಸು​ತ್ತ​ವೆ. ಅತ್ತಿಬೆಲೆ, ಸತ್ಯಮಂಗಲಂ, ಪಲಮರ್ನೇ, ಗುಂಡ್ಲುಪೇಟೆ ಸೇರಿ 6 ಕಡೆಯ ಪ್ರವೇಶದ್ವಾರಗಳಲ್ಲಿ ನಿಷೇಧ ಹೇರ​ಲಾ​ಗಿದೆ.

ಉಭಯ ರಾಜ್ಯ​ಗಳ ಪ್ರವೇಶ ನಿರಾ​ಕ​ರ​ಣೆ​ಯಿಂದ ನಿತ್ಯ ಲಾರಿ ಮಾಲೀ​ಕ​ರಿಗೆ 400 ಕೋಟಿ ಹಾಗೂ ಸರ್ಕಾ​ರಕ್ಕೆ 500 ಕೋಟಿ ರು. ನಷ್ಟ​ವಾ​ಗು​ತ್ತಿದೆ. ಕಳೆದ ಐದಿ​ನೈದು ದಿನ​ಗ​ಳಿಂದ ಸುಮಾರು 45 ರಿಂದ 50 ಸಾವಿರ ಕೋಟಿ ರು. ನಷ್ಟ​ವಾ​ಗಿದೆ. ಹೀಗಾಗಿ ಸರ್ಕಾರ ಮಧ್ಯ​ಪ್ರ​ವೇ​ಶಿಸಿ ಎರಡು ರಾಜ್ಯ​ಗ​ಳ ವ್ಯಾಪಾರ ವ್ಯವ​ಹಾರ ನಡೆ​ಸಲು ಅನು​ಮತಿ ನೀಡ​ಬೇಕು. ಲಾರಿ​ಗಳ ಸಂಚಾ​ರಕ್ಕೆ ಅವ​ಕಾಶ ನೀಡ​ಬೇಕು ಎಂದು ಕರ್ನಾ​ಟಕ ಲಾರಿ ಮಾಲೀ​ಕರು ಹಾಗೂ ಏಜೆಂಟರ ಒಕ್ಕೂ​ಟದ ಅಧ್ಯಕ್ಷ ಷಣ್ಮು​ಗಪ್ಪ ಮನವಿ ಮಾಡಿ​ದ್ದಾ​ರೆ.

ತಮಿ​ಳು​ನಾಡಿನಿಂದ ವಾಹನ ಬಿಡಿಭಾಗಗಳು, ಕೋಳಿಮೊಟ್ಟೆ, ಜೆಲ್ಲಿ​ಕ​ಲ್ಲು, ತರಕಾರಿ, ಹೂ ಕರ್ನಾಟಕಕ್ಕೆ ಬರುತ್ತವೆ. ಹಾಗೇಯೆ ರಾಜ್ಯದಿಂದ ತಮಿಳುನಾಡಿಗೆ ಈರುಳ್ಳಿ, ಸಣ್ಣಪುಟ್ಟಬಿಡಿಭಾಗಗಳು, ಬೇಳೆ ಕಾಳು​ಗಳು, ಈರುಳ್ಳಿಯನ್ನು ನೆರೆರಾಜ್ಯಕ್ಕೆ ಕೊಂಡೊ​ಯ್ಯ​ಲಾ​ಗು​ತ್ತದೆ. ಕಲಬುರ್ಗಿ, ರಾಯ​ಚೂರು, ಹಾವೇರಿ ಸೇರಿ​ದಂತೆ ನಾನಾ ಜಿಲ್ಲೆ​ಗ​ಳಿಂದ ಬಂದಂತಹ ಲಾರಿ​ಗಳು 15 ದಿನ​ಗ​ಳಿಂದ ಇಲ್ಲಿಯೇ ನಿಂತಿವೆ. ಪದಾ​ರ್ಥ​ಗಳು ಹಾಳಾ​ಗು​ತ್ತಿವೆ. ಹೀಗೆ ನಿತ್ಯ 16 ಸಾವಿರ ಲಾರಿ​ಗಳು ಸಂಚಾರ ಮಾಡು​ತ್ತೇವೆ. ಕಾವೇರಿ ವಿವಾ​ದ​ದಿಂದ ಇದೀಗ ನಿಷೇ​ಧಿ​ಸ​ಲಾ​ಗಿದೆ ಎಂದು ಅವರು ತಿಳಿ​ಸಿ​ದ​ರು.

ಸಾಮಾನ್ಯ ದಿನಗಳಲ್ಲಿ ರಾಜ್ಯ​ದಿಂದ ತಮಿಳುನಾಡಿನ ಹೊಸೂರಿಗೆ ನಿತ್ಯ ಕೆಎಸ್‌ಆರ್‌ಟಿಸಿಯ 60ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತಿದ್ದವು. ಕೃಷ್ಣಗಿರಿ, ಧರ್ಮಪುರಿಯಿಂದ ಟಿಎನ್‌ಎಸ್‌ಟಿಸಿಯ 90 ಬಸ್‌'ಗಳು ಕರ್ನಾಟಕದ ಅತ್ತಿಬೆಲೆಗೆ ಬರುತ್ತವೆ. ಈಗ ಆ ಬಸ್‌ಗಳ ಸಂಚಾರಕ್ಕೆ ನಿಷೇ​ಧಿ​ಸ​ಲಾ​ಗಿ​ದೆ. ಇದ​ರಿಂದ ಎರಡು ರಾಜ್ಯಗಳ ಸಾರಿಗೆ ನಿಗಮಗಳ ಆದಾಯದಲ್ಲಿ ಶೇ.25ರಷ್ಟು ಕಡಿಮೆಯಾಗಿದೆ.

ಅಪರಾಧ ಸಂಖ್ಯೆ ಕಡಿಮೆ:
ಕಾವೇರಿ ವಿವಾದ ಹಿನ್ನೆ​ಲೆ​ಯಲ್ಲಿ ನಗ​ರ​ದಲ್ಲಿ ಅಪ​ರಾಧಗಳ ಸಂಖ್ಯೆ ಕಡಿ​ಮೆ​ಯಾ​ಗಿದೆ ಎಂದು ಪೊಲೀಸ್‌ ಮೂಲ​ಗಳು ತಿಳಿ​ಸಿವೆ. ಎಲ್ಲೆಂದ​ರೆಲ್ಲಿ ಪೊಲೀಸ್‌ ಸಿಬ್ಬಂದಿ ಭದ್ರತೆ ನಿಯೋ​ಜ​ನೆ​ಗೊಂಡಿ​ರು​ವು​ದ​ರಿಂದ ಕಳ್ಳರು, ದರೋ​ಡೆ​ಕೋ​ರರು ಯಾವುದೇ ಕೃತ್ಯ​ದಲ್ಲಿ ಭಾಗಿ​ಯಾ​ಗು​ತ್ತಿಲ್ಲ. ಜತೆಗೆ ಕೇಂದ್ರ ಅರೆ ಸೇನಾ ಸಿಬ್ಬಂದಿ ಸಶ​ಸ್ತ್ರ​ದೊಂದಿಗೆ ಗಸ್ತು ತಿರು​ಗು​ತ್ತಿ​ರು​ವು​ದ​ರಿಂದ ಎಲ್ಲಾ ರೀತಿಯ ಅಪರಾಧ ಕೃತ್ಯ​ಗ​ಳಲ್ಲಿ ಗಣ​ನೀಯ ಪ್ರಮಾಣ ಕಡಿ​ಮೆ​ಯಾ​ಗಿದೆ. ಇನ್ನೂ ನೆರೆ ರಾಜ್ಯ​ಗ​ಳಿಂದ ಸಾಮಾ​ನ್ಯ​ವಾಗಿ ಕೆಲ ದರೋಡೆ, ಕಳ್ಳ​ತನ ಕೃತ್ಯ​ಗ​ಳಲ್ಲಿ ಭಾಗಿ​ಯಾ​ಗುವ ತಂಡ​ಗಳು ನಗರ ಪ್ರವೇ​ಶಿ​ಸಲು ಹಿಂಜ​ರಿ​ಯು​ತ್ತಿ​ದ್ದಾರೆ ಎಂದು ಪೊಲೀಸ್‌ ಮೂಲ​ಗಳು ತಿಳಿ​ಸಿ​ದ್ದಾ​ರೆ.

ಲಾರಿ ಸಂಚಾರ ನಿಷೇಧ ಸರಿಯಲ್ಲ:
ಕಾವೇರಿ ವಿಚಾ​ರ​ದಲ್ಲಿ ನಾವು ಕರ್ನಾ​ಟ​ಕದ ಪರ​ವಾ​ಗಿ​ದ್ದೇವೆ. ಆದರೆ, ಲಾರಿ​ಗಳ ಸಂಚಾರ ನಿಷೇ​ಧಿ​ಸಿ​ರು​ವುದು ಸರಿ​ಯಲ್ಲ. ಇದ​ರಿಂದ ಅಗತ್ಯ ವಸ್ತು​ಗಳ ಪೂರೈ​ಕೆ​ಯಲ್ಲಿ ಸಾಕಷ್ಟುವ್ಯತ್ಯಾ​ಸ​​ವಾ​ಗಿದ್ದು, ರೈತ​ರು, ಲಾರಿ ಮಾಲೀ​ಕ​ರಿಗೆ ನಷ್ಟ​ವಾ​ಗು​ತ್ತದೆ. ಹೀಗಾಗಿ ರಾಜ್ಯ ಸರ್ಕಾರ ಮಧ್ಯ​ಪ್ರ​ವೇ​ಶಿಸಿ ಲಾರಿ​ಗಳ ಸಂಚಾ​ರಕ್ಕೆ ಅವ​ಕಾಶ ನೀಡ​ಬೇ​ಕು ಎಂದು ಕರ್ನಾ​ಟಕ ಲಾರಿ ಮಾಲೀ​ಕರು ಹಾಗೂ ಏಜೆಂಟರ ಒಕ್ಕೂ​ಟದ ಅಧ್ಯಕ್ಷ ಷಣ್ಮು​ಗಪ್ಪ ಹೇಳುತ್ತಾರೆ.

(ಕನ್ನಡಪ್ರಭ ವಾರ್ತೆ)