ಗಗನಕ್ಕೇರಿದೆ ತರಕಾರಿ ಬೆಲೆ!

vegetables price increased due to heavy rain fall
Highlights

ಕಳೆದ ಅನೇಕ ದಿನಗಳಿಂದ ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಳೆಗಳ ಇಳುವರಿ ಕುಸಿದ ಪರಿಣಾಮ ಕೆಲವು ದಿನಗಳ ಹಿಂದೆ ಅಗ್ಗವಾಗಿ ಸಿಗುತ್ತಿದ್ದ ಅನೇಕ ತರಕಾರಿಗಳ ಬೆಲೆ ಈಗ ಏರಿಕೆಯಾಗಿದೆ. 

ಬೆಂಗಳೂರು (ಜೂ. 26): ಕಳೆದ ಅನೇಕ ದಿನಗಳಿಂದ ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಳೆಗಳ ಇಳುವರಿ ಕುಸಿದ ಪರಿಣಾಮ ಕೆಲವು ದಿನಗಳ ಹಿಂದೆ ಅಗ್ಗವಾಗಿ ಸಿಗುತ್ತಿದ್ದ ಅನೇಕ ತರಕಾರಿಗಳ ಬೆಲೆ ಈಗ ಏರಿಕೆಯಾಗಿದೆ.

ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಒಂದು ತಿಂಗಳ ಹಿಂದೆ ₹ 10ಗೆ 2 ರಿಂದ 3 ಕೆ.ಜಿ. ದೊರೆಯುತ್ತಿದ್ದ ಟೊಮೊಟೋ ಬೆಲೆ ಹೆಚ್ಚಳವಾಗಿದ್ದು, ಕೆ.ಜಿ. ₹ 20 ಗೆ ಮಾರಾಟವಾಗುತ್ತಿದೆ. ಬೀನ್ಸ್, ಹೀರೇಕಾಯಿ, ಹಸಿ ಬಟಾಣೆ, ಬೀಟ್‌ರೂಟ್, ಡಬಲ್‌ಬೀನ್ಸ್, ಬದನೆಕಾಯಿ, ನುಗ್ಗೆಕಾಯಿ ಸೇರಿದಂತೆ ಕೆಲ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಾಪ್‌ಕಾಮ್ಸ್ನಲ್ಲಿ ದಪ್ಪ ಮೆಣಸಿನಕಾಯಿ ಕೆ.ಜಿ. ₹74, ಹೊರಗೆ ಕೆ.ಜಿ. ₹120 ಕ್ಕೆ ಮಾರಾಟಗೊಳ್ಳುತ್ತಿದೆ.

ಪ್ರದೇಶವಾರು ಭಿನ್ನ ಬೆಲೆಗೆ ತರಕಾರಿ ಮಾರಾಟಗೊಳ್ಳುತ್ತಿದೆ. ಇನ್ನು ಚಿಲ್ಲರೆ ವ್ಯಾಪಾರಿಗಳು, ಕೆಲ ಪ್ರದೇಶದ ತರಕಾರಿ ಅಂಗಡಿಗಳ ವ್ಯಾಪಾರಿಗಳು ಟೊಮೊಟೋ, ಈರುಳ್ಳಿ ಕೆ.ಜಿ.ಗೆ ₹30-35 ಗೆ ಮಾರಾಟ ಮಾಡುತ್ತಿದ್ದಾರೆ. ಮಳೆ ನೆಪವಾಗಿಸಿಕೊಂಡ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದು, ಜನಸಾಮಾನ್ಯರು ತರಕಾರಿ ಖರೀದಿಸಲು ಯೋಚಿಸುವಂತಾಗಿದೆ. ಉತ್ತಮ ಮಳೆ ಸುರಿಯುತ್ತಿರುವುದು ರೈತರಿಗೆ ಒಂದೆಡೆ ಸಂತಸವಾದರೆ, ಮತ್ತೊಂದೆಡೆ ಬೆಳೆದ ಬೆಳೆ ಕೈ ಸೇರದೆ ಕಂಗಾಲಾಗುವ ಆತಂಕವೂ ಎದುರಾಗಿದೆ.

ಭರ್ಜರಿ ಮಳೆಗೆ ಕೆಲ ಪ್ರದೇಶಗಳಲ್ಲಿ ಇಳುವರಿ ನೆಲಕಚ್ಚಿದೆ. ಇದರಿಂದ ರೈತರು ಕೈಗೆ ಬಂದ ತುತ್ತು ಕೈ ಸೇರದೆ ಕಂಗೆಡುವಂತಾಗಿದೆ. ಕೆ. ಆರ್.ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹10 ಸಿಗುವ ತರಕಾರಿಗಳು, ತಳ್ಳುಗಾಡಿ ಮಾರಾಟಗಾರರು, ತರಕಾರಿ ಅಂಗಡಿಗಳಲ್ಲಿ ಕೆ.ಜಿ. ₹ 20-30 ಕ್ಕೂ ಹೆಚ್ಚಿನ ಬೆಲೆಗೆ ಖರೀದಿಯಾಗುತ್ತಿವೆ. ಆದರೆ, ರೈತರಿಗೆ ಮಾತ್ರ ಇದರ ಲಾಭ ದೊರೆಯುತ್ತಿಲ್ಲ. ಇನ್ನು ಕೆ.ಆರ್.ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪು (ನಾಟಿ) 100 ದಪ್ಪ ಕಟ್ಟು ₹2800 (1 ದಪ್ಪ ಕಟ್ಟು ₹20), ಫಾರಂ 100 ದಪ್ಪ ಕಟ್ಟು ₹1800 (1 ಕಟ್ಟಿಗೆ ₹15), ಸಬ್ಬಸಿಗೆ ₹ 10ಗೆ ಎರಡು ಕಟ್ಟು ಮಾರಾಟಗೊಳ್ಳುತ್ತಿದೆ. ಹಸಿ ಮೆಣಸಿನಕಾಯಿ ಕೆ.ಜಿ.ಗೆ ₹೪೦, ಟೊಮೊಟೋ ಗುಣಮಟ್ಟದ್ದು ಕೆ.ಜಿ. ₹ 20, ಸಾಧಾರಣ ₹ 20 ಗೆ ಒಂದೂವರೆ ಕೆ.ಜಿ. ಮಾರಲಾಗುತ್ತಿದೆ. ಆದರೆ, ಕ್ಯಾರೆಟ್, ಬೆಂಡೆಕಾಯಿ, ಬದನೆಕಾಯಿ, ಬೀನ್ಸ್, ಗೆಡ್ಡೆಕೋಸು ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಕೆಲ ತರಕಾರಿಗಳು ಕೆ.ಜಿ.ಗೆ ₹ 10ರಿಂದ ₹ 20 ಆಸುಪಾಸಿನ ಬೆಲೆ ಕಾಯ್ದುಗೊಂಡಿವೆ. 

 

loader