ಮಂಗಳೂರು (ಮೇ. 30):  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿಗಳು ಆದೇಶ ನೀಡುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆರ್‌. ಸೆಲ್ವಮಣಿ, ರಾಜ್ಯ ಜಲವಾಹಿನಿ ಮಂಡಳಿ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಧರ್ಮಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಗಮನಿಸಿ ನನ್ನೊಂದಿಗೆ ಮಾತನಾಡಿ ಸರ್ಕಾರಕ್ಕೆ ವರದಿ ನೀಡಿದ್ದಾರೆ.

ನಮ್ಮ ಕೋರಿಕೆಯನ್ನು ಮನ್ನಿಸಿ ಕುಡಿಯುವ ನೀರಿನ ಕೊರತೆಯ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು ನೇತ್ರಾವತಿ ಮತ್ತು ನೆರಿಯ ನದಿಗೆ ಎರಡು ಕಿಂಡಿ ಅಣೆಕಟ್ಟು ನಿರ್ಮಿಸಲು 7 ಕೋಟಿ ರು.ಗಳನ್ನು ಮಂಜೂರು ಮಾಡಿ ಅಧಿಕಾರಿಗಳಿಗೆ ಆದೇಶ ನೀಡಿರುವುದು ಸಂತೋಷವಾಗಿದೆ ಎಂದು ಪತ್ರದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ರಾಜ್ಯದ ಜನರು ಸಹ ಬೆಂಬಲ ವ್ಯಕ್ತಪಡಿಸಿದ್ದು, ಬೆಂಗಳೂರಿನಿಂದ ಅನೇಕ ಮಂದಿ ಧರ್ಮಸ್ಥಳಕ್ಕೆ ನೀರನ್ನು ತಂದು ಕೊಟ್ಟಿದ್ದಾರೆ. ಇದನ್ನು ಅನ್ನಪೂರ್ಣ ಛತ್ರದಲ್ಲಿ ಅಡುಗೆಗೆ ಮತ್ತು ಭಕ್ತಾದಿಗಳಿಗೆ ಕುಡಿಯಲು ಬಳಸಲಾಗಿದೆ. ಜನರ ಕಾಳಜಿಗೆ ಕ್ಷೇತ್ರದ ವತಿಯಿಂದ ಮತ್ತು ಎಲ್ಲಾ ಭಕ್ತಾದಿಗಳ ಪರವಾಗಿ ಕೃತಜ್ಞತೆಗಳು ಎಂದಿದ್ದಾರೆ.