1999ರ ಚುನಾವಣೆ ಪ್ರಚಾರ ವೇಳೆಯ ವಿಚಾರ ಬಹಿರಂಗಪಡಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು (ಅ.12): ದಂತಚೋರ ವೀರಪ್ಪನ್‌ 1999​ರಲ್ಲಿ ಸಿಎಂ ಸಿದ್ದರಾಮಯ್ಯ ಅವ​ರನ್ನೂ ಅಪಹರಿಸಲು ಯತ್ನಿಸಿ​ದ್ದನಂತೆ!

ಹೌದು. ಈ ವಿಚಾರವನ್ನು ಸ್ವತಃ ಮುಖ್ಯ​ಮಂತ್ರಿ ಸಿದ್ದರಾಮಯ್ಯ ಅವರೇ ಬಹಿರಂಗಪಡಿ​ಸಿದ್ದಾರೆ. ಮೈಸೂರಿನ ಮಾಧ್ಯಮ ಪ್ರತಿನಿಧಿ​ಗಳ ಜೊತೆ ಸೋಮವಾರ ಅನೌಪಚಾ​ರಿಕ​ವಾಗಿ ಮಾತ​ನಾ​ಡಿದ ಅವರು, ‘‘19​99ರ ಲೋಕಸಭಾ ಚುನಾ​ವಣೆ ವೇಳೆ ಚಾಮ​ರಾಜ​ನಗರ ಮೀಸಲು ಕ್ಷೇತ್ರದ ಪಕ್ಷದ ಅಭ್ಯರ್ಥಿ ಪರ ಕೊಳ್ಳೇ​ಗಾಲ ತಾಲೂ​ಕಿನ ಮಾರ್ಟಳ್ಳಿ ಸುತ್ತ​ಮುತ್ತ ಪ್ರ​ಚಾ​​ರಕ್ಕೆ ಹೋಗಿದ್ದೆ. ಆಗಲೇ ರಾತ್ರಿ​ಯಾ​ಗಿತ್ತು. ಪೊಲೀಸರು ಬಂದು, ವೀರ​ಪ್ಪನ್‌ ತಮ್ಮ ಅಪ​ಹರಣಕ್ಕೆ ಹೊಂಚು ಹಾಕಿ ಕುಳಿ​ತಿ​ರುವ ಮಾಹಿತಿ ಬಂದಿದೆ. ಹೀಗಾಗಿ ಈಗ​ಲೇ ಸ್ಥಳಬಿಟ್ಟು ಹೋಗುವಂತೆ ಸೂಚಿ​​ಸಿ​​ದರು. ಜತೆಗೆ 2 ಕೆಎಸ್‌ಆರ್‌ಪಿ ವ್ಯಾನ್‌ಗಳಲ್ಲಿದ್ದ ಪೊಲೀಸರ ಭದ್ರತೆ​ಯೊಂ​ದಿಗೆ ಕಳುಹಿಸಿ​ಕೊಟ್ಟರು. ಬಳಿಕ ನಾ​​ನು ಆ ಕಡೆ ಸುಳಿ​ಯಲೇ ಇಲ್ಲ. ಹೋ​ದ​ರೂ ಸಂಜೆ ವೇಳೆ ಹೋಗುತ್ತಿರಲಿಲ್ಲ'' ಎಂದು ಮುಗುಳ್ನಕ್ಕರು.

ವೀರಪ್ಪನ್‌ 2004ರ ಅ.18 ರಂದು ದಸರಾ ಸಂದರ್ಭದಲ್ಲಿ ತಮಿ​ಳುನಾಡಿನ ಪಾಪರಪಟ್ಟಿಎಂಬಲ್ಲಿ ತಮಿಳುನಾಡು ವಿಶೇಷ ಪಡೆಯ ಕಾರ್ಯಾಚರಣೆ ವೇಳೆ ಹತನಾದ. ಇದಾದ 12 ವರ್ಷ​ಗಳ ನಂತರ ಸಿದ್ದ ರಾಮಯ್ಯಅವರು ವೀರಪ್ಪನ್‌ನನ್ನು ನೆನಪಿಸಿಕೊಂಡಿರು​ವುದು ಹಾಗೂ 17 ವರ್ಷಗಳ ನಂತರ ತಮ್ಮ ಅಪಹರಣ ಯತ್ನದ ವಿಷಯ​ವನ್ನು ಬಹಿರಂಗಪಡಿಸಿರುವುದು ವಿಶೇಷ.