ಮಂಗಳೂರು (ಜೂ.13) : ಧರ್ಮಸ್ಥಳ ಶ್ರೀ ಕ್ಷೇತ್ರದ ಜೀವನದಿಯಾಗಿದ್ದ ನೇತ್ರಾವತಿ ಬೇಸಿಗೆಯ ತಾಪಕ್ಕೆ ಸಂಪೂರ್ಣ ಬತ್ತಿ ಹೋಗಿತ್ತು. ಆದರೆ ಇದೀಗ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. 

ದಕ್ಷಿಣ ಕನ್ನಡದ ಜೀವನದಿ ಎಂದೇ ಬಿಂಬಿತವಾಗಿರುವ ನೇತ್ರಾವತಿ ಸಂಪೂರ್ಣ ಒಣಗಿ ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳು ಸಮಸ್ಯೆ ಎದುರಿಸುವಂತಾಗಿತ್ತು. ಕೆಲ ದಿನಗಳ ಕಾಲ ಭಕ್ತರ ಭೇಟಿಗೂ ನಿಷೇಧ ಹೇರಲಾಗಿತ್ತು. ಆದರೆ ಇದೀಗ ಮತ್ತೆ ನೇತ್ರಾವತಿ ಒಡಲು ತುಂಬಿದೆ. 

ವಾಯು ಚಂಡಮಾರುತದ ಪ್ರಭಾವದಿಂದ ಭಾರೀ ಮಳೆ ಸುರಿಯುತ್ತಿರುವ ಕರಾವಳಿ ತೀರಗಳು ತತ್ತರಿಸುತ್ತಿವೆ. ಮಂಗಳೂರು ಉಡುಪಿಯಾದ್ಯಂತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. 

ಬಿರುಗಾಳಿ ಸಹಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ನಿರಂತರವಾಗಿ ಮಳೆಯಾಗುತ್ತಿದ್ದು  ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.