ದಶಕದ ಹಿಂದೆ ರಾಜಧಾನಿಯಲ್ಲಿ ಕನ್ನಡ ಕೇಳುವುದೇ ಕಷ್ಟವಾಗಿತ್ತು | ಹೊರಗಿನವರು ಕನ್ನಡ ಕಲಿಯಿರಿ: ರಾಮಲಿಂಗಾರೆಡ್ಡಿ

ಬೆಂಗಳೂರು (ಏ. 23): ಹೊರ ರಾಜ್ಯಗಳಿಂದ ಬಂದು ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ನೆಲೆಸಿರುವವರನ್ನೂ ನಾವು ಕನ್ನಡಿಗರು ಎಂದೇ ಭಾವಿಸುತ್ತೇವೆ. ಹಾಗಾಗಿ ಹೊರ ರಾಜ್ಯಗಳಿಂದ ಬಂದ ಜನರು ಕನ್ನಡ ಭಾಷೆ, ಸಂಸ್ಕೃತಿ ಕಲಿಯುವ ಮೂಲಕ ಈ ನಾಡಿಗೆ ಗೌರವ ಸಲ್ಲಿಸುವ ಕೆಲಸ ಮಾಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ವಿಯನಗರದ ಬಿಎಂಟಿಸಿ ಬಸ್‌ ನಿಲ್ದಾಣದ ಮುಂಭಾಗದ ಮೆಟ್ರೋ ಆವರಣದ ‘ಸಾ.ಶಿ. ಮರುಳಯ್ಯ ವೇದಿಕೆ'ಯಲ್ಲಿ ಆಯೋಜಿಸಿರುವ ಎರಡು ದಿನಗಳ ‘11 ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ' ಉದ್ಘಾಟಿಸಿ ಅವರು ಮಾತನಾಡಿದರು.

ನಾಡು, ನುಡಿಯ ಹಬ್ಬಗಳಿಗೆ ಹಿಂದಿನಿಂದಲೂ ಸರ್ಕಾರ ಗಳು ಉತ್ತಮ ನೆರವು ನೀಡುತ್ತ ಬಂದಿವೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕೂಡ ನೆರವು ನೀಡುತ್ತಿದೆ. ಬೆಂಗಳೂರಿನಲ್ಲಿ ದಶಕ ಗಳ ಹಿಂದೆ ಕನ್ನಡ ಭಾಷೆ ನೋಡುವುದು ಕಷ್ಟವಾಗಿತ್ತು. ಕನ್ನಡ ಚಳವಳಿಗಾರರಾದ ರಾಮಮೂರ್ತಿ, ವಾಟಾಳ್‌ ನಾಗರಾಜ್‌ರಂತಹ ನಾಯಕರ ನಿರಂತರ ಹೋರಾಟದಿಂದ ಇಂದು ಕನ್ನಡ ಎಲ್ಲೆಡೆ ಕಾಣುವಂತಾಗಿದೆ. ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕನ್ನಡ ಕರುಳಿನ ಭಾಷೆ: ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ಕನ್ನಡ ಕೊರಳಿನ ಭಾಷೆಯಾಗಬಾರದು, ಕರುಳಿನ ಭಾಷೆಯಾಗಬೇಕು. ಕನ್ನಡಕ್ಕೆ ಎಲ್ಲ ಭಾಷೆಗಳನ್ನೂ ಜೀರ್ಣಿಸಿ ಕೊಳ್ಳುವ ಶಕ್ತಿ ಇದೆ. ಕನ್ನಡ ಬೆಳೆದದ್ದೇ ಅನೇಕ ಭಾಷೆಗಳನ್ನು ಅರಗಿಸಿಕೊಂಡು. ಕನ್ನಡ ಸಾಹಿತ್ಯ ಪರಂಪರೆಯ ಸಾವಿರಾರು ವರ್ಷಗಳ ಹೆಜ್ಜೆಗುರುತನ್ನು ನೋಡಿದಾಗ ಅನೇಕ ಭಾಷೆಗಳ ಪ್ರಭಾವ ಕನ್ನಡದ ಮೇಲಾಯಿತು. ಆದರೆ, ಕನ್ನಡ ಎಲ್ಲೂ ತನ್ನ ಅಸ್ಥಿತ್ವ ಕಳೆದುಕೊಳ್ಳಲಿಲ್ಲ. ಎಲ್ಲವನ್ನೂ ಜೀರ್ಣಿಸಿಕೊಂಡು ಇನ್ನೂ ಉತ್ಕೃಷ್ಟವಾಗಿ ಬೆಳೆಯುತ್ತಾ ಬಂದಿದೆ ಎಂದರು.

ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷೆ ಲೀಲಾದೇವಿ ಆರ್‌.ಪ್ರಸಾದ್‌ ಮಾತನಾಡಿದರು. ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥನಾರಾಯಣ, ಬಿಬಿಎಂಪಿ ಸದಸ್ಯರಾದ ಡಾ.ರಾಜು, ಆನಂದ್‌ ಸಿ.ಹೊಸೂರು, ಮಾಜಿ ಸದಸ್ಯರಾದ ಎಚ್‌.ರವೀಂದ್ರ, ಲಕ್ಷ್ಮಿನಾರಾಯಣ, ವಾಗೀಶ್‌ ಮತ್ತಿತರರು ಉಪಸ್ಥಿತರಿದ್ದರು.

ಗಡಿಯಲ್ಲಿ ಮುಂದಿನ ಸಮ್ಮೇಳನ

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಮಾ​ಯಣ್ಣ, ಕನ್ನಡ ಭಾಷೆಯ ವಿಚಾರ ಬಂದಾಗ ಕನ್ನಡಿ​ಗರು ತಮ್ಮ ಎಲ್ಲ ವೈರುಧ್ಯಗಳನ್ನು ಮರೆತು ಒಂದಾಗ​ಬೇಕು. ತಮಿಳುನಾಡಿನ ಜಲ್ಲಿಕಟ್ಟು ಹೋರಾಟದ ಮಾದರಿಯಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಇಲ್ಲದಿದ್ದರೆ ಕನ್ನಡ ಉಳಿ​ಯು​ವುದಿಲ್ಲ. ಕನ್ನಡ ಎಲ್ಲರಿಗೂ ಅನಿವಾರ್ಯ, ಕನ್ನಡಕ್ಕೆ ಯಾ​ರೂ ಅನಿವಾರ್ಯವಲ್ಲ. ಯುವ ಸಮೂಹ ಹೆಚ್ಚು ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಎಂದು ಹೇಳಿ​ದರು. ಮುಂದಿನ ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇ​ಳನವನ್ನು ತಮಿಳುನಾಡಿನ ಗಡಿ ಭಾಗ ಚಂದಾ ಪುರದಲ್ಲಿ ನಡೆಸಲು ನಿರ್ಧರಿಸಲಾಗಿದೆ. ದಾಸರಹಳ್ಳಿ, ಯಶ​ವಂತಪುರ ಸೇರಿದಂತೆ ಬೇರೆ ಬೇರೆ ಕಡೆ ನಡೆಸಲು ಬೇಡಿ​ಕೆ​ಗಳು ಬಂದಿವೆ. ಆದರೆ, ಗಡಿಭಾಗದ ಚಂದಾ​ಪುರ​ದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು.