ಚಾಮರಾಜನಗರದ ಮಂಗಲದ ಬಳಿ ರಾಷ್ಟ್ರೀಯ ಹೆದ್ದಾರಿ 209 ರ ರಸ್ತೆ ತಡೆ ನಡೆಸಿದ ವಾಟಾಳ್, ಚಾಮರಾಜನಗರ ಜಿಲ್ಲೆಯಾಗಿ 20 ವರ್ಷ ಕಳೆಯುತ್ತಿದ್ದರೂ, ಜಿಲ್ಲೆಯಾಗುವುದಕ್ಕಿಂತ ಹಿಂದೆ ಹೇಗೆ ಇತ್ತೋ ಈಗಲೂ ಇಲ್ಲಿ ಅದೇ ಪರಿಸ್ಥಿತಿಯಿದೆ.
ಚಾಮರಾಜನಗರ(ಸೆ.11): ಜಿಲ್ಲೆಯ ಗ್ರಾಮೀಣ ಪ್ರದೇಶಗಳು ಹಿಂದುಳಿದಿದ್ದು, ಈ ಕೂಡಲೇ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಚಾಮರಾಜನಗರದಲ್ಲಿ ಇಂದು ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಮಂಗಲದ ಬಳಿ ರಾಷ್ಟ್ರೀಯ ಹೆದ್ದಾರಿ 209 ರ ರಸ್ತೆ ತಡೆ ನಡೆಸಿದ ವಾಟಾಳ್, ಚಾಮರಾಜನಗರ ಜಿಲ್ಲೆಯಾಗಿ 20 ವರ್ಷ ಕಳೆಯುತ್ತಿದ್ದರೂ, ಜಿಲ್ಲೆಯಾಗುವುದಕ್ಕಿಂತ ಹಿಂದೆ ಹೇಗೆ ಇತ್ತೋ ಈಗಲೂ ಇಲ್ಲಿ ಅದೇ ಪರಿಸ್ಥಿತಿಯಿದೆ. ಇಲ್ಲಿನ ಯಾವೊಬ್ಬ ಜನಪ್ರತಿನಿಧಿಯೂ ಜಿಲ್ಲಾ ಕೇಂದ್ರ ಸೇರಿದಂತೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಒಂದು ತಿಂಗಳೊಳಗಾಗಿ ಸರಕಾರ ಹಾಗೂ ಜಿಲ್ಲಾಡಳಿತ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ಆ ಮೂಲಕ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರವಾಗಿ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ವಾಟಾಳ್ ನಾಗರಾಜ್ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಅನಂತರ ಪ್ರತಿಭಟನೆ ನಡೆಸುತ್ತಿದ್ದ ವಾಟಾಳ್ ಸೇರಿದಂತೆ ಅವರ ಬೆಂಬಲಿಗರನ್ನು ಪೊಲೀಸರು ಬಂಧಿಸಿದರು.
