ಬೆಂಗಳೂರು [ಆ.01]:  ದೇಶಪ್ರೇಮಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ರದ್ದುಪಡಿಸಿರುವ ಆದೇಶವನ್ನು ವಾಪಸ್‌ ಪಡೆಯಬೇಕು. ಈ ಹಿಂದಿನಂತೆ ರಾಜ್ಯ ಸರ್ಕಾರವೇ ಟಿಪ್ಪು ಜಯಂತಿ ಆಚರಿಸಬೇಕು ಎಂದು ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಒತ್ತಾಯಿಸಿದರು.

ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬುಧವಾರ ಕನ್ನಡ ವಾಟಾಳ್‌ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್‌ ಈ ದೇಶ ಕಂಡ ಮಹಾ ದೇಶ ಪ್ರೇಮಿ. ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿರುವುದು ಈ ದೇಶಕ್ಕೆ ಮಾಡಿದ ಅಪಮಾನ. ಬ್ರಿಟಿಷರ ವಿರುದ್ಧ ಹೋರಾಡಿ, ತನ್ನಿಬ್ಬರು ಮಕ್ಕಳನ್ನು ನಾಡಿಗಾಗಿ ಅಡಮಾನವಿಟ್ಟಮಹಾವೀರ ಟಿಪ್ಪು ಅವರ ಜಯಂತಿ ರದ್ದುಪಡಿಸಿದ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಾಟಾಳ್‌ ಪಕ್ಷದ ಮುಬಾರಕ್‌ಪಾಶಾ, ಎಸ್‌.ಆರ್‌.ಪಾರ್ಥಸಾರಥಿ, ನಾರಾಯಣಸ್ವಾಮಿ, ಎಂ.ರಾಮು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಹಾಗೂ ಹಾಲಿ ರಾಷ್ಟ್ರಪತಿ ಕೋವಿಂದ್‌ ಅವರು ಟಿಪ್ಪು ಸುಲ್ತಾನ್‌ ಅವರ ಸಾಹಸ, ದೇಶಪ್ರೇಮ ಮತ್ತು ರಾಕೆಟ್‌ ತಂತ್ರಜ್ಞಾನವನ್ನು ಹಾಡಿ ಹೊಗಳಿದ್ದರು. ಮರಾಠರು, ಪೇಶ್ವೆಗಳು ಶೃಂಗೇರಿ ಶಾರದಾದೇವಿ ದೇವಸ್ಥಾನದ ಮೇಲೆ ದಾಳಿ ಮಾಡಿ ಲೂಟಿ ಮಾಡುತ್ತಿದ್ದ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್‌ ಸೇನೆಯನ್ನು ಕಳುಹಿಸಿ ರಕ್ಷಿಸಿದ್ದರು. ಅನೇಕ ಹಿಂದು ದೇವಾಲಯಗಳಿಗೆ ಆರ್ಥಿಕವಾಗಿ ನೆರವು ನೀಡಿದ್ದರು. ಅಂತಹ ಮಹಾವೀರನ ಜಯಂತಿ ರದ್ದುಪಡಿಸುವಲ್ಲಿ ಕುತಂತ್ರಿಗಳ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.