"ಕನ್ನಡ ದ್ರೋಹಿ ಲಕ್ಷ್ಮೀ ಹೆಬ್ಬಾಳ್ಕರ್; ಕನ್ನಡಿಗರ ಪಾಲಿಗೆ ಈಕೆ ಪಿಶಾಚಿ, ದೆವ್ವ. ಕಾಂಗ್ರೆಸ್ ಪಕ್ಷ 24 ಗಂಟೆಯೊಳಗಾಗಿ ಈಕೆಯನ್ನು ಕೆಳಗಿಳಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡುತ್ತೇವೆ. ನಾಡಿದ್ದು(ಶನಿವಾರ) ಬೆಳಗ್ಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಈಕೆಯ ಭೂತವನ್ನು ದಹನ ಮಾಡಿ, ರಾಜ್ಯಾದ್ಯಂತ ತೀವ್ರ ಹೋರಾಟಕ್ಕೆ ಕರೆ ಕೊಡುತ್ತಿದ್ದೇವೆ" ಎಂದು ಕನ್ನಡ ಹೋರಾಟ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು(ಆ. 31): ಮಹಾರಾಷ್ಟ್ರಕ್ಕೆ ಜೈ ಎನ್ನುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಲಕ್ಷ್ಮೀ ಹೆಬ್ಬಾಳ್ಕರ್ ತಲೆದಂಡಕ್ಕೆ ಆಗ್ರಹಗಳಾಗುತ್ತಿವೆ. ಕನ್ನಡಪರ ಸಂಘಟನೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾಂಗ್ರೆಸ್ ನಾಯಕಿ ತಲೆದಂಡವಾಗುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವಾಟಾಳ್ ನಾಗರಾಜ್ ದೆವ್ವ ಪಿಶಾಚಿ ಎಂದು ಜರಿದಿದ್ದಾರೆ. ಹೆಬ್ಬಾಳ್ಕರ್'ರನ್ನು ಗಡೀಪಾರು ಮಾಡುವಂತೆ ಕರವೇ ಮುಖ್ಯಸ್ಥ ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ.
ವಾಟಾಳ್ ನಾಗರಾಜ್ ಎಚ್ಚರಿಕೆ:
"ಕನ್ನಡ ದ್ರೋಹಿ ಲಕ್ಷ್ಮೀ ಹೆಬ್ಬಾಳ್ಕರ್; ಕನ್ನಡಿಗರ ಪಾಲಿಗೆ ಈಕೆ ಪಿಶಾಚಿ, ದೆವ್ವ. ಕಾಂಗ್ರೆಸ್ ಪಕ್ಷ 24 ಗಂಟೆಯೊಳಗಾಗಿ ಈಕೆಯನ್ನು ಕೆಳಗಿಳಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡುತ್ತೇವೆ. ನಾಡಿದ್ದು(ಶನಿವಾರ) ಬೆಳಗ್ಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಈಕೆಯ ಭೂತವನ್ನು ದಹನ ಮಾಡಿ, ರಾಜ್ಯಾದ್ಯಂತ ತೀವ್ರ ಹೋರಾಟಕ್ಕೆ ಕರೆ ಕೊಡುತ್ತಿದ್ದೇವೆ" ಎಂದು ಕನ್ನಡ ಹೋರಾಟ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಗಡೀಪಾರಿಗೆ ಪ್ರವೀಣ್ ಶೆಟ್ಟಿ ಆಗ್ರಹ:
ಮಹಾರಾಷ್ಟ್ರಪರ ಮಾತನಾಡುವ ಮೂಲಕ ಲಕ್ಷ್ಮೀ ಹೆಬ್ಬಾಳ್'ಕರ್ ತಮ್ಮ ನೈಜ ಮನಸ್ಥಿತಿಯನ್ನು ತೋರಿಸಿಕೊಟ್ಟಿದ್ದಾರೆ. ಅಧಿಕಾರ ಮಾತ್ರ ಕರ್ನಾಟಕದಲ್ಲಿ.. ಪ್ರೀತಿ ಮಾತ್ರ ಮಹಾರಾಷ್ಟ್ರಕ್ಕೆ. ಇವರ ನೈಜ ಬುದ್ಧಿಯನ್ನ ಸಭೆಗಳಲ್ಲಿ ವೋಟಿಗಾಗಿ ತೋರಿಸಿಕೊಟ್ಟಿದ್ದಾರೆ. ಅದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಹೋರಾಟ ಪ್ರಾರಂಭ ಮಾಡುತ್ತಿದ್ದೇವೆ. ಪ್ರತೀ ಜಿಲ್ಲೆಗಳಲ್ಲೂ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪಣತೊಟ್ಟಿದ್ದಾರೆ.
ಇದೇ ವೇಳೆ, ಕನ್ನಡಪರ ಯೋಜನೆಗಳನ್ನು ಹಾಕಿಕೊಂಡಿರುವ ಕರ್ನಾಟಕ ಸರಕಾರದಲ್ಲಿ ಇಂಥದ್ದಕ್ಕೆ ಆಸ್ಪದ ಕೊಟ್ಟಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯ ಉದ್ದೇಶಕ್ಕೋಸ್ಕರ ಕನ್ನಡಿಗರು ಮತ್ತು ಮುಗ್ಧ ಮರಾಠಿಗರ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
"ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯನವರು ಕನ್ನಡದ ಬಗ್ಗೆ ಹಲವು ಯೋಜನೆಗಳನ್ನ ಹಾಕಿಕೊಂಡಿದ್ದಾರೆ. ಮೆಟ್ರೋದಲ್ಲಿ ನಾಮಫಲಕಗಳಲ್ಲಿ ಕನ್ನಡ ಬಳಕೆ ಮಾಡಿಸುತ್ತಿದ್ದಾರೆ. ಕನ್ನಡ ಬಾವುಟದ ವಿನ್ಯಾಸ ಮಾಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಈ ಕೂಡಲೇ ಉಚ್ಛಾಟನೆ ಮಾಡಬೇಕು. ಅವರನ್ನ ಈ ನಾಡಿನಿಂದ ಗಡೀಪಾರು ಮಾಡಬೇಕು. " ಎಂದು ಕರವೇ ಮುಖ್ಯಸ್ಥರು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ, ಕೋಲಾರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕನ್ನಡಪರ ಸಂಘಟನೆಗಳು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಕಡೆ ಕಾಂಗ್ರೆಸ್ ನಾಯಕಿಯ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
