Asianet Suvarna News Asianet Suvarna News

ಜೀವಪರ ಮೌಲ್ಯಗಳ ಅದಮ್ಯ ಶಕ್ತಿ ವಾಲ್ಮೀಕಿ

ವಂಶಾಡಳಿತ, ನಿರಂಕುಶ ಪ್ರಭುತ್ವಗಳ ಬಗ್ಗೆ ಚಿಂತಿಸಿದ್ದ ವಾಲ್ಮೀಕಿ ದುಷ್ಟಶಿಕ್ಷಣ ಶಿಷ್ಟರಕ್ಷಣೆಯನ್ನು ಸಾರಿದ್ದಾರೆ. ಶೋಷಿತರ ನೇತಾರನಾಗಿ, ಭ್ರಾತೃತ್ವದ ಹರಿಕಾರನಾಗಿ ಅವರು ಕಂಗೊಳಿಸುತ್ತಾರೆ.  

Valmiki Jayanti 2018 Sanskrits first poet Luv-Kush  guru and other interesting facts
Author
Bengaluru, First Published Oct 24, 2018, 11:04 AM IST
  • Facebook
  • Twitter
  • Whatsapp

ಬೆಂಗಳೂರು(ಅ.24): ಮಹರ್ಷಿ ವಾಲ್ಮೀಕಿಯು ರಾಮಾಯಣದ ಕರ್ತೃ. ಆದಿಕವಿ ಹಾಗೂ ಮಹಾಕವಿಯಾಗಿದ್ದಾರೆ. ವಾಲ್ಮೀಕಿಯ ಮೊದಲ ಹೆಸರು ರತ್ನಾಕರ. ತಂದೆ ಪ್ರಚೇತಸೇನ. ಬೇಟಗಾರಿಕೆ ಆತನ ಪ್ರಮುಖ ವೃತ್ತಿಯಾಗಿತ್ತು. ಬೇಡ ಸಮುದಾಯದ ಈತ ನಾರದಮುನಿಗಳಿಂದ ಪರೀಕ್ಷೆಗೊಳಪಟ್ಟು ಮನಃಪರಿವರ್ತನೆಗೊಂಡು ಜ್ಞಾನೋದಯ ಪಡೆದ. ನಾರದನ ಉಪದೇಶ, ಸಪ್ತರ್ಷಿಗಳ ಪರಿಚಯ, ರಾಮ ಮಂತ್ರೋಪದೇಶವನ್ನು ಪಡೆದು ತಪಸ್ಸು ಮಾಡುವಾಗ ಆತನ ಮೇಲೆ ಹುತ್ತ (ವಲ್ಮೀಕ) ಬೆಳೆದು ವಾಲ್ಮೀಕಿ ಮಹರ್ಷಿ ಎಂಬ ಹೆಸರು ಬಂತು.

ಒಮ್ಮೆ ವಾಲ್ಮೀಕಿ ತಮಸಾ ನದಿಗೆ ಸ್ನಾನಕ್ಕೆ ಹೋದಾಗ ಬೇಡನೊಬ್ಬನ ಬಾಣದ ಹೊಡೆತಕ್ಕೆ ಗಂಡು ಕ್ರೌಂಚ ಪಕ್ಷಿ ಸಾವನ್ನಪ್ಪಿದ್ದನ್ನು ನೋಡಿದ. ಆಗ ಹೆಣ್ಣು ಕ್ರೌಂಚ ಪಕ್ಷಿ ಗೋಳಿಡುವ ದೃಶ್ಯ ಆತನ ಮನಸ್ಸನ್ನು ಕಲಕಿತು. ಏಕಕಾಲಕ್ಕೆ ದುಃಖವೂ ಸಿಟ್ಟೂವಾಲ್ಮೀಕಿಯನ್ನು ಆವರಿಸಿತು. ಆ ಬೇಸರದಲ್ಲಿ ವಾಲ್ಮೀಕಿಯ ಬಾಯಿಯಲ್ಲಿ ಆಶುವಾಗಿ ಹುಟ್ಟಿದ ಶ್ಲೋಕವೇ ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ

ಯತ್ಕೌರಂಚಮಿಥುನಾದೇಕಮವಧೀಃ ಕಾಮಮೋಹಿತಮ್‌
ಎಂಬ ಶಾಪರೂಪದ ಶ್ಲೋಕ. ಇದು ಜಗತ್ತಿನ ಮೊದಲ ಛಂದೋಬದ್ಧ ಶ್ಲೋಕವೂ, ರಾಮಾಯಣಕ್ಕೆ ನಾಂದಿಯೂ ಆಯಿತು.

ರಾಮಾಯಣ ಹುಟ್ಟಿದ್ದು ಹೇಗೆ?
ಭೂಮಂಡಲದಲ್ಲಿ ಸಕಲ ಸದ್ಗುಣ ಸಂಪನ್ನನೂ, ಮಹಾವೀರನೂ, ಸರ್ವಧರ್ಮಪಾಲಕನೂ, ಅತ್ಯಂತ ಕೃತಜ್ಞನೂ, ಸತ್ಯವ್ರತನೂ, ಸಕಲ ಜೀವರಾಶಿಯನ್ನು ಸಮನಾಗಿ ನೋಡತಕ್ಕವನೂ, ದೇವತೆಗಳಲ್ಲಿ ಪೂಜ್ಯನೂ, ಸಕಲ ಸಾರ್ವಭೌಮ ಲಕ್ಷಣಗಳಿಂದ ಸಮಪ್ರಮಾಣಯುಕ್ತ ಅವಯವಗಳುಳ್ಳ ನರಶಾರ್ದೂಲನಂತೆ ಶೋಭಿಸುವವನೂ, ಧರ್ಮಜ್ಞ, ಸತ್ಯಸಂಧ, ಗಂಭೀರ ಸ್ವಭಾವದ, ಚತುರನೂ ಆದ ಶ್ರೀರಾಮನ ಜನನ ವೃತ್ತಾಂತವನ್ನು ನಾರದರು ವಾಲ್ಮೀಕಿಗೆ ಉಪದೇಶಿಸಿದರು. ನಂತರ ವಾಲ್ಮೀಕಿಯು ರಾಮನ ವೃತ್ತಾಂತವಾದ ರಾಮಾಯಣವನ್ನೇ ಬರೆದರು.

ವಾಲ್ಮೀಕಿಯ ಬಾಯಿಯಿಂದ ಹೊರಟ ಶಬ್ದಗಳು ಹೊಸ ಛಂದಸ್ಸಿನ ರೂಪ ತಳೆದು ಸುಂದರ ಪದ್ಯಗಳಾಗಿದ್ದು, ಬರಹ ಸಂಕಲ್ಪವಾಗಿ ಹೃದ್ಗೋಚರವಾಗತೊಡಗಿ ರಾಮಾಯಣ ಮಹಾಗ್ರಂಥ 6 ಕಾಂಡಗಳಲ್ಲಿ, 24,000 ಶ್ಲೋಕಗಳಲ್ಲಿ ಹೊರಹೊಮ್ಮಿತು. ರಾಮಾಯಣ ಗ್ರಂಥವು ದಶರಥನ ತಪಸ್ಸಿನ ಫಲದಿಂದ ಜನಿಸಿದ ಶ್ರೀರಾಮನಿಂದ ಪ್ರಾರಂಭಿಸಿ, ವನವಾಸ, ರಾವಣನ ವಧೆ, ಪಟ್ಟಾಭಿಷೇಕ, ಅಯೋಧ್ಯೆಯ ಆಳ್ವಿಕೆ ಮುಂತಾದವುಗಳಿಂದ ಪೂರ್ಣಗೊಳ್ಳುತ್ತದೆ. ಈ ಸಂಪೂರ್ಣವಾದ, ಸುಮಧುರವಾದ ಕಾವ್ಯವನ್ನು ಮೊದಲು ಯಾರಿಗೆ ಉಪದೇಶಿಸಬೇಕೆಂದು ಮಹರ್ಷಿ ವಾಲ್ಮೀಕಿ ಯೋಚಿಸುತ್ತಿರುವಾಗ ಋುಷಿಕುಮಾರರ ವೇಷದಲ್ಲಿದ್ದ ಬಾಲಸಿಂಹಗಳಾದ ಲವಕುಶರು ತಮಗೆ ಬೋಧಿಸಬೇಕೆಂದು ಪ್ರಾರ್ಥಿಸಿಕೊಳ್ಳುತ್ತಾರೆ. ಶ್ರೀರಾಮನ ದೇಹವೆಂಬ ಪಡಿಯಚ್ಚಿನಲ್ಲಿ ಎರಕ ಹೊಯ್ದು ತೆಗೆದಂತಿದ್ದ ಅದೇ ರೂಪ, ತೇಜಸ್ಸು, ಅಲ್ಲದೇ ಗಾಂಭಿರ್ಯದ ಲವಕುಶರಿಗೆ ಸುಸ್ವರದಿಂದ ತಾಳಲಯಬದ್ಧವಾಗಿ ವಾಲ್ಮೀಕಿ ಮುನಿಗಳು ರಾಮಾಯಣವನ್ನು ಕಲಿಸುತ್ತಾರೆ. ತಮ್ಮ ಆಶ್ರಮದಲ್ಲಿ ಲವಕುಶರಿಗೆ ಸಕಲ ಕ್ಷತ್ರಿಯ ವಿದ್ಯೆಯನ್ನು ಬೋಧಿಸಿದ ಕೀರ್ತಿಯೂ ವಾಲ್ಮೀಕಿಗೆ ಸಲ್ಲುತ್ತದೆ.

ವಾಲ್ಮೀಕಿ ಏಕೆ ಇಂದಿಗೂ ಮುಖ್ಯ?
ವಾಲ್ಮೀಕಿ ಮಹರ್ಷಿ ಜಾತ್ಯತೀತ ವ್ಯಕ್ತಿ, ಐತಿಹಾಸಿಕ ವ್ಯಕ್ತಿಯೂ ಹೌದು. ಸಮಾಜ ಸುಧಾರಕ, ಶಿಕ್ಷಣ ತಜ್ಞನೂ ಹೌದು. ಲವಕುಶರು ಸಕಲ ವಿದ್ಯಾ ಪಾರಂಗತರಾಗಿದ್ದು ಇದಕ್ಕೆ ಸಾಕ್ಷಿ. ಪಿತೃವಾಕ್ಯ ಪರಿಪಾಲನೆ, ವನವಾಸ, ಸಿಂಹಾಸನ ತ್ಯಾಗ, ಸಹೋದರತೆ, ಸಮಾನತೆ, ರಾಮ ಲಕ್ಷ್ಮಣ ಭರತರ ಮೂಲಕ ಆದರ್ಶ ರಾಜ್ಯದ ಪರಿಕಲ್ಪನೆ, ರಾಮರಾಜ್ಯದ ಕನಸು.. ಇವೆಲ್ಲ ವಾಲ್ಮೀಕಿ ಒಬ್ಬ ರಾಜನೀತಿಶಾಸ್ತ್ರಜ್ಞ ಎಂಬುದನ್ನು ತೋರಿಸುತ್ತವೆ. ರಾಮಾಯಣ ಕಾವ್ಯದಲ್ಲಿ ಹಿಂಸೆ ಹಾಗೂ ಕ್ರೌರ್ಯವನ್ನು ತೆಗಳಿರುವ ವಾಲ್ಮೀಕಿ, ಇವೆಲ್ಲ ಸಮಾಜಕ್ಕೆ ಮಾರಕ ಎಂದಿದ್ದಾರೆ. ಏಕ ಪತ್ನಿಯಿಂದ ಸುಖ, ನೆಮ್ಮದಿ ಪಡೆಯಬೇಕು, ಅನ್ಯಾಯದ ವಿರುದ್ಧ ಪ್ರತಿಭಟಿಸಬೇಕು ಎಂದು ರಾವಣ, ವಾಲಿ, ಸುಗ್ರೀವ, ಆಂಜನೇಯನ ಕಥೆಯ ಮೂಲಕ ಹೇಳಿದ್ದಾರೆ. ಅವಿಭಕ್ತ ಕುಟುಂಬ, ವಂಶಾಡಳಿತ, ನಿರಂಕುಶ ಪ್ರಭುತ್ವಗಳ ಬಗ್ಗೆ ಚಿಂತಿಸಿದ್ದ ವಾಲ್ಮೀಕಿ ದುಷ್ಟಶಿಕ್ಷಣ ಶಿಷ್ಟರಕ್ಷಣೆಯನ್ನು ಸಾರಿದ್ದಾರೆ. ಆದುದರಿಂದ ಅವರೊಬ್ಬ ತತ್ವಜ್ಞಾನಿ ಕೂಡ ಹೌದು. ಶೋಷಿತರ ನೇತಾರನಾಗಿ, ಭ್ರಾತೃತ್ವದ ಹರಿಕಾರನಾಗಿ ಅವರು ಕಂಗೊಳಿಸುತ್ತಾರೆ.

ರಾಮಾಯಣದಿಂದ ನಾವೇನು ಕಲಿಯಬೇಕು?
ಮಹರ್ಷಿ ವಾಲ್ಮೀಕಿಯು ರಾಮಾಯಣದ ಮೂಲಕ ಅಂದಿನ ಜನಜೀವನದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ರಾಮೇಶ್ವರ, ಗೋಕರ್ಣ, ಕಿಷ್ಕಿಂಧೆ, ತಮಸಾ ನದಿ, ಚಿತ್ರಕೂಟ ಹೀಗೆ ಭಾರತದೇಶದ ಉದ್ದಗಲಕ್ಕೂ ರಾಮಾಯಣದ ಕುರುಹುಗಳನ್ನು ಕಾಣಬಹುದು.

ರಾಮಾಯಣವು ಹಿಂದುಗಳಿಗೆ ಪವಿತ್ರ ಗ್ರಂಥ. ಈ ಗ್ರಂಥದ ಮೂಲಕ ಭಾರತವು ರಾಮರಾಜ್ಯ ಸರ್ವೋದಯಕ್ಕೆ ನಾಂದಿ ಹಾಡಿದೆ. ಮಾನವನು ಮಾನವನಾಗಿ ಬಾಳಲು ಸೋಪಾನವಾದುದು ರಾಮಾಯಣ. ಕ್ರೂರಜಂತುಗಳ ಬಾಧೆಯಿಲ್ಲದೆ, ರೋಗರುಜಿನಗಳ ಬಾಧೆಯಿಲ್ಲದೆ, ಸಕಲರೂ ಸುಖಿಗಳಾಗಿ, ಧರ್ಮನಿಷ್ಠರಾಗಿ, ಆದರ್ಶ ಪುರುಷರಾಗಿ, ಅನ್ಯೋನ್ಯರಾಗಿ ಜೀವಿಸಿದ್ದ ಕಾಲದ ಚಿತ್ರಣವನ್ನು ರಾಮಾಯಣ ಕಟ್ಟಿಕೊಡುತ್ತದೆ. ಅಂದು ಮನುಷ್ಯರು ದುರಾಸೆಯಿಲ್ಲದೆ ಸಂತೃಪ್ತಿಯಿಂದ ಕರ್ತವ್ಯನಿರತರಾಗಿ ಬದುಕುತ್ತಿದ್ದರು. ರಾಮಾಯಣದ ಮೂಲಕ ವಾಲ್ಮೀಕಿ ಮುನಿಗಳು ಬದುಕಿನ ಆದರ್ಶದ ಎಲ್ಲ ಆಯಾಮಗಳನ್ನು ಸುಂದರವಾಗಿ ರಚಿಸಿ ಚಿರನೂತನ ಹಾಗೂ ಚಿರಚೇತನವಾಗಿ ನಿರಂತರವಾಗಿ ಬಾಳಿನಲ್ಲಿ ಹಾಸುಹೊಕ್ಕಾಗಿ ಉಳಿಯುವಂತಹ ಅಮೂಲ್ಯ ಕೊಡುಗೆಯನ್ನು ಮನುಕುಲಕ್ಕೆ ಸಮರ್ಪಿಸಿ ನಮ್ಮ ಸ್ಮರಣೆಯಲ್ಲಿ ಅಮರವಾಗಿದ್ದಾರೆ. ವಾಲ್ಮೀಕಿಯವರ ಪುಣ್ಯಸ್ಮರಣೆ, ಅವರ ಜಯಂತಿ ಆಚರಣೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಇದೊಂದು ಅರ್ಥಪೂರ್ಣ ಗಳಿಗೆ. ಮಹರ್ಷಿ ವಾಲ್ಮೀಕಿಗೆ ಹೃದಯಪೂರ್ವಕ ನಮನಗಳು.

ಬಿ.ವಿ.ಬಸವರಾಜ ನಾಯಕ
ರಾಜ್ಯಾಧ್ಯಕ್ಷರು
ಕರ್ನಾಟಕ ವಾಲ್ಮೀಕಿ ನಾಯಕ ಪರಿಷತ್‌

Follow Us:
Download App:
  • android
  • ios