ಬಿಎಸ್‌ವೈ ಹೇಳಿದರೆ ಹನೂರಿನಿಂದ ಸ್ಪರ್ಧಿಸಲ್ಲ: ಸೋಮಣ್ಣ

First Published 31, Mar 2018, 8:34 AM IST
V Somanna May Contest From Hanur
Highlights

ಮಾಜಿ ಸಚಿವ ದಿ.ಎಚ್‌. ನಾಗಪ್ಪರ ಪತ್ನಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಹಾಗೂ ಅವರ ಪುತ್ರ ಡಾ.ಪ್ರೀತನ್‌ ನಾಗಪ್ಪನವರಿಗೆ ನೋವು ನೀಡುವ ಉದ್ದೇಶ ನನ್ನದ್ದಲ್ಲ. ಪಕ್ಷ ಹಾಗೂ ರಾಜ್ಯ, ರಾಷ್ಟ್ರ ನಾಯಕರ ಅಣತಿಯಂತೆ ಕ್ಷೇತ್ರದ ಅಭ್ಯರ್ಥಿಯಾಗಲು ಬಯಸಿದ್ದೇನೆ. ಇದು ನನ್ನ ತೀರ್ಮಾನವಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಹನೂರು : ಮಾಜಿ ಸಚಿವ ದಿ.ಎಚ್‌. ನಾಗಪ್ಪರ ಪತ್ನಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಹಾಗೂ ಅವರ ಪುತ್ರ ಡಾ.ಪ್ರೀತನ್‌ ನಾಗಪ್ಪನವರಿಗೆ ನೋವು ನೀಡುವ ಉದ್ದೇಶ ನನ್ನದ್ದಲ್ಲ. ಪಕ್ಷ ಹಾಗೂ ರಾಜ್ಯ, ರಾಷ್ಟ್ರ ನಾಯಕರ ಅಣತಿಯಂತೆ ಕ್ಷೇತ್ರದ ಅಭ್ಯರ್ಥಿಯಾಗಲು ಬಯಸಿದ್ದೇನೆ. ಇದು ನನ್ನ ತೀರ್ಮಾನವಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಕಾಮಗೆರೆಯಲ್ಲಿರುವ ಪರಿಮಳಾ ನಾಗಪ್ಪ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ, ನಾಗಪ್ಪ ಕುಟುಂಬದ ಬೆಂಬಲಿಗರನ್ನುದ್ದೇಶಿಸಿ ಅವರು ಮಾತನಾಡಿದರು.

ಈಗಾಗಲೇ ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೆ ಬಿಜೆಪಿ ಸಮೀಕ್ಷೆಯ ವರದಿಗಳು ತಲುಪಿದ್ದು, ಹನೂರು ವಿಧಾನಸಭಾ ಕ್ಷೇತ್ರದಿಂದ ತನ್ನನ್ನು ಅಭ್ಯರ್ಥಿಯನ್ನಾಗಿ ಮಾಡಲು ಬಯಸಿದ್ದಾರೆ. ಅಂತೆಯೇ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಪರಿಮಳಾ ನಾಗಪ್ಪಗೆ ಕ್ಷೇತ್ರವನ್ನು ಸೋಮಣ್ಣಗೆ ಬಿಟ್ಟು ಕೊಡಿ. ನಿಮ್ಮ ಅಥವಾ ನಿಮ್ಮ ಮಗನನ್ನು ಎಂಎಲ್‌ಸಿ ಆಗಿ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಕ್ಷೇತ್ರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ:

ಈ ವೇಳೆ ಮಾತನಾಡಿದ ಪರಿಮಳಾ ನಾಗಪ್ಪ, ಯಡಿಯೂರಪ್ಪ ಮಾರ್ಗದರ್ಶನದಂತೆ ಪ್ರೀತನ್‌ ರಾಜಕೀಯಕ್ಕೆ ಕಾಲಿಟ್ಟರು. ಪ್ರೀತನ್‌ಗೆ ಎಲ್ಲೆಡೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ಯಾವುದೇ ಕಾರಣಕ್ಕೂ ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ. ಸೋಮಣ್ಣ ಸಹ ಪ್ರೀತನ್‌ಗೆ ಬೆಂಬಲ ನೀಡಬೇಕು ಎಂದರು.

ಬಿಎಸ್‌ವೈ ಹೇಳಿದರೆ ಬಿಟ್ಟುಕೊಡುವೆ: ಸೋಮಣ್ಣ

ಏ.2ರ ವರೆಗೆ ಬಿಎಸ್‌ವೈ ಮನವೊಲಿಸಲು ಯತ್ನಿಸುತ್ತೇನೆ. ಒಂದೊಮ್ಮೆ ಇದಕ್ಕೆ ಒಪ್ಪದೆ ಪ್ರೀತನ್‌ಗೆ ಕ್ಷೇತ್ರ ಬಿಟ್ಟುಕೊಡಲು ಹೇಳಿದರೆ ಖಂಡಿತವಾಗಿ ನಾನೇ ಬಿಟ್ಟು ಕೊಡುತ್ತೇನೆ ಎಂದು ಸೋಮಣ್ಣ ಹೇಳಿದರು.

ಏನು ತಪ್ಪು ಮಾಡದ ಯಡಿಯೂರಪ್ಪರನ್ನು ಸಿದ್ದರಾಮಯ್ಯ ಜೈಲಿಗೆ ಹೋಗಿ ಬಂದವರು ಎಂದು ತೇಜೋವಧೆ ಮಾಡುತ್ತಿದ್ದಾರೆ. ಬಹುಸಂಖ್ಯಾತ ಧರ್ಮವನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿದ್ದಾರೆ. ಸಿದ್ದರಾಮಯ್ಯರ ಭಾಷೆ ನಡವಳಿಕೆಯು ಮಿತಿ ಮೀರಿದೆ. ಅವರ ಸೊಕ್ಕನ್ನು ಮುರಿಯಲು ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು.

loader