"ಎಂಥದ್ದೇ ಸ್ಟಂಟ್ ಮಾಡಿದ್ರೂ ಯಾರೂ ಕೇರ್ ಮಾಡೋದಿಲ್ಲ. ಇನ್ನೂ ಕಷ್ಟದ ಸ್ಟಂಟ್ ಮಾಡಿಸ್ತಾರೆ ಅಷ್ಟೇ" ಎಂದು ಚಿತ್ರರಂಗದ ದುರಂತ ಮನಃಸ್ಥಿತಿಯನ್ನು ರವಿಚಂದ್ರನ್ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು(ನ. 07): ಮಾಸ್ತಿಗುಡಿ ಸಿನಿಮಾ ಚಿತ್ರೀಕರಣ ವೇಳೆ ಇಬ್ಬರು ನಟರ ದುರಂತ ಸಾವಿನ ಪ್ರಕರಣಕ್ಕೆ ಹಿರಿಯ ನಟ ರವಿಚಂದ್ರನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ದೊಡ್ಡ ದುರಂತ ಎಂದು ಟೀಕಿಸಿದ್ದಾರೆ. ಈಜು ಸರಿಯಾಗಿ ಬರದವರನ್ನು ಇಂಥ ಅಪಾಯಕಾರಿ ಸ್ಟಂಟ್'ಗೆ ಬಳಸಿದ್ದು ತಪ್ಪು ಎಂದು ರವಿಚಂದ್ರನ್ ಅಭಿಪ್ರಾಯಪಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಸುವರ್ಣನ್ಯೂಸ್ ಜೊತೆ ಮಾತನಾಡಿದ ರವಿಚಂದ್ರನ್, "ಈ ಹುಡುಗರು ತಮಗೆ ಈಜು ಬರೋದಿಲ್ಲ, ಈ ಸ್ಟಂಟ್ ಮಾಡೋದಿಲ್ಲ ಎಂದು ಹೇಳಬಹುದಿತ್ತು. ಸ್ಟಂಟ್ ಮಾಡದೇ ಇದ್ದರೆ ಮುಂದಿನ ಸಿನಿಮಾಗಳಿಗೆ ಚಾನ್ಸ್ ಸಿಕ್ಕೋದಿಲ್ಲ ಎಂಬ ಭಯ ಅವರಿಗೆ. ಎಂಥದ್ದೇ ಸ್ಟಂಟ್ ಮಾಡಿದ್ರೂ ಯಾರೂ ಕೇರ್ ಮಾಡೋದಿಲ್ಲ. ಇನ್ನೂ ಕಷ್ಟದ ಸ್ಟಂಟ್ ಮಾಡಿಸ್ತಾರೆ ಅಷ್ಟೇ" ಎಂದು ಚಿತ್ರರಂಗದ ದುರಂತ ಮನಃಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

ಇದೇ ವೇಳೆ, ವಾಹಿನಿ ಜೊತೆ ಮಾತನಾಡಿದ ಖಳನಟ ರವಿಶಂಕರ್ ಕೂಡ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸ್ಟಂಟ್ ಮಾಡಲು ಹಿಂದೇಟು ಹಾಕುತ್ತಿದ್ದ ಆ ಇಬ್ಬರು ನಟರನ್ನು ಸ್ಟಂಟ್ ಮಾಡಲು ಇನ್ಸಿಸ್ಟ್ ಮಾಡಿದಿದ್ದರೆ ಅದು ಶುದ್ಧ ತಪ್ಪು ಎಂದು ರವಿಶಂಕರ್ ಅಭಿಪ್ರಾಯಪಟ್ಟಿದ್ದಾರೆ.