ಪಿತೋರ್‌ಗಢ[ಮೇ.22]: ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ದೊರೆಯುವ ವಯಾಗ್ರಾಕ್ಕಾಗಿ ಉತ್ತರಾಖಂಡದ ಎರಡು ಗ್ರಾಮಗಳ ಜನರ ಮಧ್ಯೆ ಇದೀಗ ಪೈಪೋಟಿ ಏರ್ಪಟ್ಟಿದೆ.

ಬೇಸಿಗೆಯಲ್ಲಿ ಹಿಮಾಲಯದ ಹುಲ್ಲುಗಾವಲು ಪ್ರದೇಶದಲ್ಲಿ ಬೆಳೆಯುವ ಕೀಡಾ ಜಾಡಿ ಅಥವಾ ಹಿಮಾಲಯದ ವಯಾಗ್ರಾ ಸಸ್ಯ ಕಾಮೋತ್ತೇಜಕ ಮಾತ್ರೆಗಳ ರೀತಿಯಲ್ಲಿ ಕೆಲಸ ಮಾಡುವ ಕಾರಣಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೆಲೆ ಇದೆ. ಒಣಗಿದ ಕೀಡಾ ಜಡಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ 18 ಲಕ್ಷ ರು.ವರೆಗೂ ಮಾರಾಟವಾಗುತ್ತದೆ.

ಈ ಗಿಡವನ್ನು ಸಂಗ್ರಹಿಸುವ ವಿಷಯವಾಗಿ ಬುಯಿ ಮತ್ತು ಪಾಟೋ ಗ್ರಾಮಗಳ ಜನರ ಮಧ್ಯೆ ಕಲಹ ಏರ್ಪಟಿದೆ. ಇಬ್ಬರೂ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಕೀಡಾ ಜಾಡಿ ಸಂಗ್ರಹಿಸದಂತೆ ಕಾವಲು ಕಾಯುತ್ತಿದ್ದು, ರಾಲಂ ಮತ್ತು ರಾಜರಾಂಘ ಬಗ್ಯಾಲ್ಸ್‌ ಹುಲ್ಲುಗಾವಲಿನಲ್ಲಿ ಬೆಳೆಯುವ ವಯಾಗ್ರಾ ತಮಗೇ ಸೇರಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ.

ರಾಲಂ ಹುಲ್ಲುಗಾವಲು ಪ್ರದೇಶ ತಮಗೇ ಸೇರಿದ್ದು ಎಂದು ಎರಡೂ ಗ್ರಾಮಗಳ ಜನರು ಪೊಲೀಸರಿಗೆ ದೂರನ್ನು ಸಹ ನೀಡಿದ್ದಾರೆ. ಮನಸ್ಥಾಪವನ್ನು ಬಗೆಹರಿಸಿಕೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಗ್ರಾಮಸ್ಥರ ಮಧ್ಯೆ ಸಮಸ್ಯೆ ಇತ್ಯರ್ಥವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಹೀಗಾಗಿ ಹಿಮಾಲಯದ ಗುಡ್ಡಾಗಾಡು ಪ್ರದೇಶಗಳಲ್ಲಿ ಇದೀಗ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.