ಮಂಗಳೂರು[ಆ.01]: ಆಪ್ತಮಿತ್ರ ಸಿದ್ಧಾರ್ಥ ನಾಪತ್ತೆ ಪ್ರಕರಣದಿಂದ ಪತ್ತೆವರೆಗೆ ಇಡೀ ಕಾರ್ಯಾಚರಣೆ ಉಸ್ತುವಾರಿ ವಹಿಸಿಕೊಂಡದ್ದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್‌ ಹಾಗೂ ಅವರ ಸಹೋದರ ಡಾ.ಇಫ್ತಿಕಾರ್‌.

ಸೋಮವಾರ ಸಿದ್ಧಾರ್ಥ ನಾಪತ್ತೆಯಾಗಿರುವುದನ್ನು ತಿಳಿದ ಕೂಡಲೇ ಯು.ಟಿ.ಖಾದರ್‌ ನೇರವಾಗಿ ನೇತ್ರಾವತಿ ಸೇತುವೆ ಬಳಿ ಧಾವಿಸಿ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದರು. ಕೂಡಲೇ ಶೋಧ ಕಾರ್ಯಾಚರಣೆಗೂ ಸೂಚನೆ ನೀಡಿದರು. ಸಹೋದರನಿಗೆ ಜೊತೆಯಾಗಿ ಇಫ್ತಿಕಾರ್‌ ಕೂಡ ನೆರವಾದರು. ಇವರಿಬ್ಬರು ಸೋಮವಾರ ತಡರಾತ್ರಿ ವರೆಗೂ ಶೋಧ ಕಾರ್ಯಾಚರಣೆ ತಂಡಕ್ಕೆ ಸಲಹೆ ಸೂಚನೆ ನೀಡುತ್ತಾ ಇದ್ದುದು ಗಮನಾರ್ಹವಾಗಿತ್ತು.

ಮಂಗಳವಾರ ಮುಂಜಾನೆಯಿಂದ ಮತ್ತೆ ಖುದ್ದು ಹಾಜರಿದ್ದು ಯು.ಟಿ.ಖಾದರ್‌ ಮತ್ತು ಇಫ್ತಿಕಾರ್‌ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದರು. ಮಂಗಳವಾರ ರಾತ್ರಿ ಒಂದು ಹಂತದಲ್ಲಿ ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿ ಮರುದಿನ ಮುಂದುವರಿಸುವುದಾಗಿ ಜಿಲ್ಲಾಡಳಿತ ಹೇಳಿದಾಗ, ಸೀಮಿತ ತಂಡದ ಜೊತೆಗೆ ಕಾರ್ಯಾಚರಣೆ ಮುಂದುವರಿಸುವಂತೆ ಖಾದರ್‌ ಸೂಚಿಸಿದ್ದರು. ಅಲ್ಲದೆ ಸ್ವತಃ ಖಾದರ್‌ ಹಾಗೂ ಇಫ್ತಿಕಾರ್‌ ಅವರೇ ತಡರಾತ್ರಿ ವರೆಗೂ ಕಾರ್ಯಾಚರಣೆಯಲ್ಲಿ ಹಾಜರಿದ್ದರು.

ಶವ ಪತ್ತೆ ಸ್ಥಳಕ್ಕೂ ಹಾಜರ್‌:

ಬುಧವಾರ ಬೆಳಗ್ಗೆ ಹೊಯ್ಗೆ ಬಜಾರ್‌ನಲ್ಲಿ ಸಿದ್ಧಾರ್ಥ ಶವ ಪತ್ತೆಯಾದ್ದು ತಿಳಿದ ಕೂಡಲೇ ಯು.ಟಿ.ಖಾದರ್‌ ತೆರಳಿ ಶವದ ವಿಲೇವಾರಿ ವ್ಯವಸ್ಥೆಗೊಳಿಸಿದರು. ಬಳಿಕ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ತ್ವರಿತವಾಗಿ ನಡೆಯುವಂತೆ ನೋಡಿಕೊಂಡರು. ಈ ವೇಳೆ ಇಫ್ತಿಕಾರ್‌ ಅವರು ಸಿದ್ಧಾರ್ಥ ಆಪ್ತರಿಗೆ ಧೈರ್ಯ ಹೇಳುತ್ತಾ, ಒಟ್ಟಾರೆ ವ್ಯವಸ್ಥೆಯಲ್ಲಿ ತೊಡದಿಸಿಕೊಂಡಿದ್ದರು.

ಶವದ ಜೊತೆಗೆ ಇಫ್ತಿಕಾರ್‌ ಪಯಣ:

ಸಿದ್ಧಾರ್ಥ ಶವವನ್ನು ಆ್ಯಂಬುಲೆನ್ಸ್‌ ಮೂಲಕ ಚಿಕ್ಕಮಗಳೂರಿಗೆ ತೆಗೆದುಕೊಂಡು ಹೋಗುವಾಗ ಇಫ್ತಿಕಾರ್‌ ಕೂಡ ಇದ್ದರು. ಯು.ಟಿ.ಖಾದರ್‌ ಅವರು ಶವ ಹೊತ್ತ ಆ್ಯಂಬುಲೆನ್ಸ್‌ ಬೇಗನೆ ಚಿಕ್ಕಮಗಳೂರು ತಲುಪಲು ಬೇಕಾದ ಬೆಂಗಾವಲು ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಇದರಿಂದಾಗಿ ಸಕಾಲದಲ್ಲಿ ಶವ ಚಿಕ್ಕಮಗಳೂರು ತಲುಪಲು ಸಾಧ್ಯವಾಯಿತು.