ಅನ್‌ಸ್ಟ್ರಕ್ಚರ್ಡ್‌ ಸಪ್ಲಿಮೆಂಟರಿ ಡೇಟಾ (ಯುಎಸ್‌ಎಸ್‌ಡಿ) ಸೇವೆಯನ್ನು ಮೊಬೈಲ್‌ ಮೂಲಕ ಪಡೆಯಲು ನಿಮ್ಮ ಮೊಬೈಲಿಗೆ ಇಂಟರ್‌ನೆಟ್ಟು/3ಜಿ/4ಜಿ ಸಂಪರ್ಕ ಬೇಕಾಗಿಲ್ಲ. ಇವ್ಯಾವುದೂ ಇಲ್ಲದೆ ಸುಲಭವಾಗಿ ಬ್ಯಾಂಕ್‌ ಖಾತೆಯಿಂದ ದುಡ್ಡು ವರ್ಗಾಯಿಸುವ ಸುರಕ್ಷಿತ ವ್ಯವಸ್ಥೆಯೇ ಯುಎಸ್‌ಎಸ್‌ಡಿ.
- ಕೃಷ್ಣಮೋಹನ ತಲೆಂಗಳ, ಕನ್ನಡಪ್ರಭ
ನೋಟುಗಳ ನಿಷೇಧದ ಬಳಿಕದ ‘ನಗದುರಹಿತ'ರಾಗಿ ದಿನದೂಡುವ ದಿನಗಳಿವು. ಆದಾಗ್ಯೂ ನಗು ಮರೆಯಬೇಡಿ, ನಗು ನಗುತ್ತಾ ಬದುಕಲು ಕ್ಯಾಶ್ಲೆಸ್ ವಹಿವಾಟು ಮಾಡಿ ಎಂದು ಸರ್ಕಾರ ಕರೆ ನೀಡುತ್ತಿದೆ. ನಗದು ರಹಿತರಾಗಿ ಬದುಕಲು ಸ್ಮಾರ್ಟ್ ಫೋನ್ ಅದಕ್ಕೊಂದು ಇಂಟರ್ನೆಟ್ ಸಂಪರ್ಕ ಬೇಡವೇ ಎಂಬ ಮೂಲಭೂತ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅವೆರಡೂ ಇಲ್ಲದೆ, ಬೇಸಿಕ್ ಮೊಬೈಲ್ ಹ್ಯಾಂಡ್ಸೆಟ್ನಲ್ಲೇ ನಗದು ವಹಿವಾಟು ಸಾಧ್ಯವಾಗಿಸಿದೆ ಯುಎಸ್ಎಸ್ಡಿ ಸೇವೆ.
ಹಾಗೆಂದು ಯುಎಸ್ಎಸ್'ಡಿ ಎನ್ನುವ ಸೇವೆ ಇಂದು, ನಿನ್ನೆ ಹುಟ್ಟಿಕೊಂಡಿದ್ದಲ್ಲ. ಮೊಬೈಲ್ ಸೇವೆಯಲ್ಲಿ ಹಿಂದಿನಿಂದಲೂ ಬಳಕೆಯಲ್ಲಿತ್ತು. ಈಗ ನಗದು ರಹಿತರಾಗುವ ಭರಾಟೆಯಲ್ಲಿ ಹೆಚ್ಚು ಪ್ರಚಲಿತವಾಗಿರುವ ಸೇವೆಯಿದು.
ಏನಿದು ಯುಎಸ್ಎಸ್ಡಿ?: ಅನ್ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಡೇಟಾ (ಯುಎಸ್ಎಸ್ಡಿ) ಸೇವೆಯನ್ನು ಮೊಬೈಲ್ ಮೂಲಕ ಪಡೆಯಲು ನಿಮ್ಮ ಮೊಬೈಲಿಗೆ ಇಂಟರ್ನೆಟ್ಟು/3ಜಿ/4ಜಿ ಸಂಪರ್ಕ ಬೇಕಾಗಿಲ್ಲ. ಇವ್ಯಾವುದೂ ಇಲ್ಲದೆ ಸುಲಭವಾಗಿ ಬ್ಯಾಂಕ್ ಖಾತೆಯಿಂದ ದುಡ್ಡು ವರ್ಗಾಯಿಸುವ ಸುರಕ್ಷಿತ ವ್ಯವಸ್ಥೆಯೇ ಯುಎಸ್ಎಸ್ಡಿ.
ಮೊಬೈಲ್ ರೀಚಾರ್ಜ್, ಟಾಪ್ ಅಪ್ ಹಾಕಿಸುವಾಗ ಅಂಗಡಿಯಲ್ಲಿ ಕೇವಲ ಬೇಸಿಕ್ ಮಾದರಿಯ ಮೊಬೈಲ್ ಬಳಸಿ ದುಡ್ಡು ರೀಚಾರ್ಜ್ ಮಾಡುವುದನ್ನು ನೀವು ಗಮನಿಸಿರಬಹುದು. ಅದು, ಇದೇ ಯುಎಸ್ಎಸ್ಡಿ ವ್ಯವಸ್ಥೆ ಬಳಸಿ ಮಾಡುವ ಸೇವೆ. ನಾವು ಯಾವುದೇ ನಗದು ವ್ಯವಹಾರ ಮಾಡಲು ಕಳುಹಿಸುವ ಸಂಕೇತಾಕ್ಷರಗಳು ಟೆಲಿ ಕಮ್ಯೂನಿಕೇಶನ್ ಸರ್ವರ್ನ್ನು ಸಂಪರ್ಕಿಸಿ ಅಗತ್ಯ ಕೆಲಸ ಮಾಡುತ್ತವೆ.
ಮೂಲತಃ ಯುಎಸ್ಎಸ್'ಡಿಯನ್ನು ಟೆಲಿಕಮ್ಯುನಿಕೇಶನ್ ಇಲಾಖೆಯಲ್ಲಿ ಬಳಸಲಾಗುತ್ತದೆ. ಎಲ್ಲಾ ಜಿಎಸ್ಎಂ ಹ್ಯಾಂಡ್'ಸೆಟ್ಗಳಲ್ಲಿ ಕೆಲಸ ಮಾಡುತ್ತದೆ. ಇದಕ್ಕೆ ಇಂಟರ್ನೆಟ್ ಸೇವೆ ಬೇಕಾಗಿಲ್ಲ.
ಅನ್'ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾವನ್ನು ಕ್ವಿಕ್ ಕೋಡ್ಸ್ ಅಥವಾ ಪೀಚರ್ ಕೋಡ್ಸ್ ಎಂದೂ ಕರೆಯಲಾಗುತ್ತದೆ. ಯುಎಸ್ಎಸ್ಡಿಯನ್ನು ಮೂಲಭೂತವಾಗಿ ವ್ಯಾಪ್ ಬ್ರೌಸರ್ಗಳಿಗಾಗಿ, ಪ್ರಿಪೇಯ್ಡ್ ಕಾಲ್ಬ್ಯಾಂಕ್ ಸೇವೆಗಾಗಿ, ಮೊಬೈಲ್ ಹಣಕಾಸು ಸೇವೆಗಾಗಿ, ಲೊಕೇಶನ್ ಬೇಸ್ಡ್ ಕಂಟೆಂಟ್ ಸರ್ವಿಸ್, ಮೆನು ಬೇಸ್ಡ್ ಇನ್ಫೋರ್ಮೇಶನ್ ಸರ್ವಿಸ್ಗಳಲ್ಲಿ ಬಳಸುತ್ತಾರೆ.
ಯುಎಸ್ಎಸ್'ಡಿ ಮೆಸೇಜ್'ಗಳು ಗರಿಷ್ಠ 182 ಅಲ್ಫಾನ್ಯೂಮರಿಕ್ ಅಕ್ಷರಗಳ ಸಾಮರ್ಥ್ಯ ಹೊಂದಿವೆ. ಯುಎಸ್ಎಸ್ಡಿ ಕೇವಲ ಎಸ್ಎಂಎಸ್ ಥರ ಸಂದೇಶ ಕಳುಹಿಸುವುದು ಮಾತ್ರವಲ್ಲ. ತಕ್ಷಣ ಸರ್ವರ್ ಜೊತೆ ಸಂಪರ್ಕ ಸಾಧಿಸುತ್ತವೆ ಈ ಮೂಲಕ ದ್ವಿಮುಖ ಸಂವಹನ ಜಾಲ ಜೋಡಿಸಿ ಮಾಹಿತಿ ವಿನಿಮಯ ನಡೆಸಲು ಕಿಟಕಿ ತೆರೆದಿಡುತ್ತದೆ. ಬಹುತೇಕ ಜಿಎಸ್ಎಂ ಫೋನ್ಗಳು ಯುಎಸ್ಎಸ್ಡಿ ಸೇವೆ ಹೊಂದಿವೆ. ಯುಎಸ್ಎಸ್ಡಿ ಸಂದೇಶಗಳು ರಿಯಲ್ ಟೈಂ ಅಥವಾ ಇನ್ಸ್ಟಂಟ್ ಸೇವೆ. ಈ ಸಂದೇಶಗಳನ್ನು ಎಸ್ಎಂಎಸ್ ಮಾದರಿಯಲ್ಲಿ ಫಾರ್ವರ್ಡ್ ಅಥವಾ ಶೇಖರಿಸಲು ಆಗುವುದಿಲ್ಲ.
ಬ್ಯಾಂಕಿಂಗ್'ನಲ್ಲಿ ಬಳಕೆ ಹೇಗೆ?
ಯುಎಸ್ಎಸ್'ಡಿ ವ್ಯವಸ್ಥೆಯಲ್ಲಿ ಬ್ಯಾಂಕಿಂಗ್ ಮಾಡುವಾಗ ವಿವಿಧ ವ್ಯವಹಾರಗಳಿಗೆ ಪ್ರತ್ಯೇಕ ಸಂಕೇತಾಕ್ಷರಗಳ ಮೂಲಕ ಕಳುಹಿಸಿದ ಎಸ್ಎಂಎಸ್ ಆರಂಭದಲ್ಲಿ ಟೆಲಿಫೋನ್ ಆಪರೇಟರ್ಸ್ ಸರ್ವರ್'ಗೆ ಹೋಗುತ್ತದೆ. ಅದು ಬ್ಯಾಂಕ್ ಸರ್ವರ್'ನ್ನೂ ಸಂಪರ್ಕಿಸುತ್ತದೆ. ಈ ಮೂಲಕ ನಮ್ಮ ಖಾತೆಗೆ ಸಂಪರ್ಕ ಕಲ್ಪಿಸಿ ಅಗತ್ಯ ವ್ಯವಹಾರವನ್ನು ಸಾಧ್ಯವಾಗಿಸುತ್ತದೇ. ಅದೂ ಇಂಟರ್ನೆಟ್ ಸಂಪರ್ಕ ಇಲ್ಲದೆ. ಖಾತೆಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಜೋಡಿಸಿದಲ್ಲಿಗೆ ವ್ಯವಹಾರ ನಡೆಸಲು ನೀವು ಸಿದ್ಧರಾಗುತ್ತೀರಿ. ಸ್ಟಾರ್99ಹ್ಯಾಶ್ ಸಂಕೇತಾಕ್ಷರ ಎಸ್ಎಂಎಸ್ ಮೂಲಕ ಬ್ಯಾಂಕಿಂಗ್ ವ್ಯವಹಾರಗಳು ನಡೆಯುತ್ತವೆ. ಈ ವ್ಯವಹಾರ ವ್ಯವಸ್ಥೆಯನ್ನು ನ್ಯಾಶನಲ್ ಯೂನಿಫೈಡ್ ಯುಎಸ್ಎಸ್ಡಿ ಪ್ಲಾಟ್ಫಾರಂ (ಎನ್ಯುಯುಪಿ) ಎಂದು ಕರೆಯಲಾಗುತ್ತದೆ. ಬಳಿಕ ಎಸ್ಎಂಎಸ್ ಕಳುಹಿಸಿದಷ್ಟೇ ಸುಲಭವಾಗಿ ಸೂಚನೆಗಳನ್ನು ಪಾಲಿಸಿಕೊಂಡು ವ್ಯವಹಾರ ಮಾಡಬಹುದು.
ಎನ್ಯುಯುಪಿ - ಏನದು?
ಎನ್ಯುಯುಪಿ ವ್ಯವಸ್ಥೆಯನ್ನು ಭಾರತ ಸರ್ಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ (ಎನ್ಪಿಸಿಐ) ನೂತನ ಸೇವೆಯಾಗಿ 2014ರಲ್ಲಿ ಪರಿಚಯಿಸಿತು. ಯುಎಸ್ಎಸ್ಡಿ ಸೇವೆ ಆಧರಿಸಿ ಬ್ಯಾಂಕಿಂಗ್ ಹಾಗೂ ಟೆಲಿಕಮ್ಯುನಿಕೇಶನ್ ಸಂಸ್ಥೆಗಳು ಒಟ್ಟಾಗಿ ಬ್ಯಾಂಕಿಂಗ್ ಸೇವೆ ನೀಡಲು ಇದು ಸಹಕಾರಿಯಾಯಿತು. ಇದು ಭಾರತೀಯ ರಿಸವ್ರ್ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ಮಾರ್ಗದರ್ಶನ ಹಾಗೂ ಉತ್ತೇಜನದಿಂದ ಕೆಲಸ ಮಾಡುತ್ತದೆ.
ಬ್ಯಾಂಕಿಂಗ್ ಸೇವೆಗಾಗಿ ಎನ್ಯುಯುಪಿಗೆ ಟೆಲಿಕಾಂ ಸೇವಾ ಪೂರೈಕೆದಾರರು ಶುಲ್ಕ ವಿಧಿಸುತ್ತಾರೆ. ಟ್ರಾಯ್ ಪ್ರತಿ ವ್ಯವಹಾರಕ್ಕೆ ರು.1.50 ನಿಗದಿಪಡಿಸಿದೆ. ಆದರೂ ನಿಮ್ಮ ಸೇವಾ ಪೂರೈಕೆದಾರರು ಎಷ್ಟುಶುಲ್ಕ ವಿಧಿಸುತ್ತಾರೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳುವುದು ಲೇಸು.
ಎಲ್ಲೆಲ್ಲಾ ಬಳಕೆಯಾಗುತ್ತದೆ?
* ಫೋನ್ ಕಂಪನಿಯ ಜಾಲ ಬಳಸಿ ಮೆಸೇಜ್ ಕಳುಹಿಸಿದಾಗ ಅದಕ್ಕೆಂದೇ ಮೀಸಲಾದ ಕಂಪ್ಯೂಟರ್ ಸರ್ವರ್'ನ್ನು ತಲುಪಿ ಅಲ್ಲಿಂದ ಗ್ರಾಹಕರಿಗೆ ಎಸ್ಎಂಎಸ್ ರೂಪದಲ್ಲೇ ಉತ್ತರ ದೊರಕುತ್ತದೆ. ಈ ಮೂಲಕ ವ್ಯವಹಾರ ಸಾಧ್ಯವಾಗುತ್ತದೆ. ಇದು ಮಾನವರಹಿತ ಸೇವೆಯಾಗಿರುವುದರಿಂದ ದಿನದ 24 ಗಂಟೆಯೂ ಸೇವೆ ಬಳಸಲು ಸಾಧ್ಯವಾಗುತ್ತದೆ.
* ಯುಎಸ್ಎಸ್ಡಿಯು ಕಾಲ್ಬ್ಯಾಕ್ ಸೇವೆ ನೀಡುತ್ತದೆ. ಇವು ಮೊಬೈಲ್ ಮಾರ್ಕೆಟಿಂಗ್ನಂತಹ ಕ್ಷೇತ್ರಗಳಲ್ಲಿ ಬಳಕೆಯಾಗುತ್ತದೆ.
* ಸಾಮಾನ್ಯವಾಗಿ ಯುಎಸ್ಎಸ್ಡಿಯನ್ನು ಜಿಎಸ್ಎಂ ಸೆಲ್ಯೂಲಾರ್ ಫೋನ್ಗಳಲ್ಲಿ ಬ್ಯಾಲೆನ್ಸ್ ವಿಚಾರಿಸಲು ಬಳಸಲಾಗುತ್ತದೆ. ಅಥವಾ ಲಭ್ಯವಿರುವ ರಿಚಾಜ್ರ್ ಪ್ಯಾಕ್ಗಳ ವಿವರ, ಆಫರ್ಗಳನ್ನೂ ತಿಳಿದುಕೊಳ್ಳಬಹುದು. ಜೊತೆಗೆ ಮೊಬೈಲ್ ಖಾತೆ ರಿಚಾರ್ಜ್/ಟಾಪ್ಅಪ್ ಮಾಡಿಸಲು ಹಾಗೂ ವನ್'ಟೈಂ ಪಾಸ್ ವರ್ಡ್ (ಒಟಿಪಿ) ಅಥವಾ ಪಿನ್ ಕೋಡ್ ಕಳುಹಿಸಲೂ ಬಳಕೆಯಾಗುತ್ತದೆ.
* ಇನ್ನು ಕೆಲವು ಆಪರೇಟರ್'ಗಳು ಸಾಮಾಜಿಕ ತಾಣಗಳಾದ ಫೇಸ್'ಬುಕ್, ಟ್ವಿಟರ್ ಇತ್ಯಾದಿಗಳ ಅಪ್'ಡೇಟ್'ಗಳನ್ನು ತಕ್ಷಣ ನೀಡಲು ಯುಎಸ್ಎಸ್'ಡಿ ವ್ಯವಸ್ಥೆಯನ್ನು ಬಳಸುತ್ತದೆ. ವಿಕಿಪೀಡಿಯಾ ಬರಹಗಳನ್ನು ಕಳುಹಿಸಲೂ ಇದನ್ನು ಬಳಸುತ್ತದೆ.
(epaper.kannadaprabha.in)
