ಅನ್ಯ ದೇಶಗಳ ರಾಜಕೀಯ ಪಕ್ಷಗಳ ಮೇಲೆ ಅಮೆರಿಕ ಬೇಹುಗಾರಿಕೆ ನಡೆಸುತ್ತಿರುವುದು ಇದೇ ಮೊದಲಲ್ಲ.
ನವದೆಹಲಿ(ಏ.11): ಒಂದೆಡೆ ಭಾರತದ ಜತೆ ಉತ್ತಮ ಸಂಬಂಧ ಹೊಂದಿರುವ ಅಮೆರಿಕ, ಮತ್ತೊಂದೆಡೆ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಮೇಲೆಯೇ ಬೇಹುಗಾರಿಕೆ ನಡೆಸುತ್ತಿದೆ ಎಂಬ ಕುತೂಹಲಕರ ಮಾಹಿತಿಯೊಂದು ಬೆಳಕಿಗೆ ಬಂದಿದೆ.
ಭಾರತದಲ್ಲಿ ಬಿಜೆಪಿ ಹಾಗೂ ಪಾಕಿಸ್ತಾನದಲ್ಲಿ ಪೀಪಲ್ಸ್ ಪಾರ್ಟಿಯ ಮೇಲೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್'ಎಸ್'ಎ) ಗೂಢಚರ್ಯೆ ನಡೆಸುತ್ತಿದೆ ಎಂದು ರಹಸ್ಯ ದಾಖಲೆ ಬಹಿರಂಗಪಡಿಸುವ ವಿಕಿಲೀಕ್ಸ್ ಹೇಳಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ರಾಜಕೀಯ ಪಕ್ಷಗಳ ಮೇಲೆ ಬೇಹುಗಾರಿಕೆ ನಡೆಸುವುದರ ಜತೆಗೆ ಪಾಕಿಸ್ತಾನದ ಮೊಬೈಲ್ ನೆಟವರ್ಕಿಂಗ್ ವ್ಯವಸ್ಥೆಯನ್ನೇ ಎನ್'ಎಸ್'ಎ ಹ್ಯಾಕ್ ಮಾಡಿದೆ ಎಂದು ಹೇಳಿದೆ.
ಅನ್ಯ ದೇಶಗಳ ರಾಜಕೀಯ ಪಕ್ಷಗಳ ಮೇಲೆ ಅಮೆರಿಕ ಬೇಹುಗಾರಿಕೆ ನಡೆಸುತ್ತಿರುವುದು ಇದೇ ಮೊದಲಲ್ಲ. ಬಹುತೇಕ ರಾಷ್ಟ್ರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಬಗ್ಗೆ ಗೂಢಚರ್ಯೆ ನಡೆಸಲು ಎನ್'ಎಸ್'ಎಗೆ ಅಮೆರಿಕ ಅನುಮತಿ ಕೊಟ್ಟಿದ್ದ ವಿಷಯ ಆ ದೇಶವೇ ಬಹಿರಂಗಪಡಿಸಿದ ಹಳೆಯ ಕಡತಗಳಲ್ಲಿ ಇದೆ.
