Asianet Suvarna News Asianet Suvarna News

ಹೆಚ್-1ಬಿ ವೀಸಾ: ಇನ್ಫೋಸಿಸ್, ಟಿಸಿಎಸ್ ಮೇಲೆ ಟ್ರಂಪ್ ಕೆಂಗಣ್ಣು

ಅಮೆರಿಕದ ಜನರು ಕೆಲಸ ಕಳೆದುಕೊಳ್ಳುವಂಥ ಸ್ಥಿತಿ ಬಂದಿದೆ. ಹೆಚ್-1ಬಿ ವೀಸಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಈ ಸಮಸ್ಯೆಗಳನ್ನು ನಿವಾರಿಸಬಹುದು ಎಂಬುದು ಟ್ರಂಪ್ ಸರಕಾರದ ಎಣಿಕೆ.

us accuses infosys tcs for violating h1b visa norms
  • Facebook
  • Twitter
  • Whatsapp

ವಾಷಿಂಗ್ಟನ್(ಏ. 23): ಅನೇಕ ಭಾರತೀಯ ಕಂಪನಿಗಳು ನಿಯಮಬಾಹಿರವಾಗಿ ಹೆಚ್-1ಬಿ ವೀಸಾ ಪಡೆಯುತ್ತಿವೆ ಎಂಬ ಆರೋಪ ಅಮೆರಿಕದಲ್ಲಿ ವ್ಯಕ್ತವಾಗುತ್ತಿದೆ. ಈ ವಿಚಾರದಲ್ಲಿ ಇನ್ಫೋಸಿಸ್, ಟಿಸಿಎಸ್ ಮತ್ತು ಕಾಗ್ನೈಜೆಂಟ್ ಸಂಸ್ಥೆಗಳ ಮೇಲೆ ಅಮೆರಿಕ ಸರಕಾರ ನೇರವಾಗಿ ಆರೋಪಿಸಿದೆ. ಇವೆರಡು ಕಂಪನಿಗಳೇ ಬಹುತೇಕ ಹೆಚ್-1ಬಿ ವೀಸಾಗಳನ್ನ ಪಡೆದುಕೊಳ್ಳುತ್ತಿವೆಯಂತೆ. ಅಮೆರಿಕ ಆರೋಪಿಸುವ ಪ್ರಕಾರ, ಇನ್ಫೋಸಿಸ್, ಟಿಸಿಎಸ್ ಸೇರಿದಂತೆ ಕೆಲ ಸಂಸ್ಥೆಗಳು ಹೆಚ್-1ಬಿ ವೀಸಾದ ಲಾಟರಿ ವ್ಯವಸ್ಥೆಗೆ ಹೆಚ್ಚುವರಿ ಟಿಕೆಟ್'ಗಳನ್ನು ಸೇರಿಸುವ ಮೂಲಕ ಹೆಚ್ಚು ವೀಸಾಗಳನ್ನು ಪಡೆದುಕೊಳ್ಳುತ್ತಿವೆ. ಇದರಿಂದ ಅಮೆರಿಕನ್ ನೌಕರರ ಕೆಲಸಕ್ಕೆ ಸಂಚಕಾರವಾಗುತ್ತಿದೆಯಂತೆ. ಈ ನಿಟ್ಟಿನಲ್ಲಿ ಹೆಚ್-1ಬಿ ವೀಸಾದ ನೀತಿಯಲ್ಲಿ ಬದಲಾವಣೆ ತರಲು ಟ್ರಂಪ್ ಆಡಳಿತ ನಿರ್ಧರಿಸಿದೆ.

ಅಮೆರಿಕದ ಆರೋಪಗಳೇನು?
1) ಇನ್ಫೋಸಿಸ್, ಟಿಸಿಎಸ್, ಕಾಗ್ನೈಸೆಂಟ್ ಮೊದಲಾದ ಭಾರತೀಯ ಕಂಪನಿಗಳು ಹೆಚ್-1ಬಿ ವೀಸಾ ಪಡೆಯಲು ಲಾಟರಿ ವ್ಯವಸ್ಥೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಹೆಚ್ಚುವರಿ ಟಿಕೆಟ್'ಗಳನ್ನು ಹಾಕುತ್ತವೆ. ಇದರಿಂದ ವೀಸಾ ಸಿಂಹಪಾಲು ಈ ಕಂಪನಿಗಳದ್ದಾಗುತ್ತದೆ.
2) ಹೆಚ್-1ಬಿ ವೀಸಾ ನಿಯಮದಲ್ಲಿರುವುದಕ್ಕಿಂತ ಬಹಳ ಕಡಿಮೆ ಸಂಬಳಕ್ಕೆ ಭಾರತದಿಂದ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆತರಲಾಗುತ್ತಿದೆ. ಅಮೆರಿಕದಲ್ಲಿ ಸಾಫ್ಟ್'ವೇರ್ ಎಂಜಿನಿಯರ್'ಗೆ ಸರಾಸರಿ ವಾರ್ಷಿಕ ಸಂಬಳ 1.5 ಲಕ್ಷ ಡಾಲರ್(ಸುಮಾರು 1 ಕೋಟಿ ರೂ.) ಇರಬೇಕೆಂಬ ನಿಯಮವಿದೆ. ಆದರೆ, 60-65 ಸಾವಿರ ಡಾಲರ್ ವಾರ್ಷಿಕ ಸಂಬಳ ಕೊಟ್ಟು ಭಾರತೀಯರನ್ನು ಕರೆತರಲಾಗುತ್ತಿದೆಯಂತೆ.
3) ಅಮೆರಿಕದ ನೌಕರರಿಗಿಂತ ಕಡಿಮೆ ಕೌಶಲ್ಯವಿರುವವರನ್ನು ಭಾರತದಿಂದ ಕರೆತರಲಾಗುತ್ತಿದೆ. ಇದೂ ಕೂಡ ಹೆಚ್-1ಬಿ ವೀಸಾ ನಿಯಮಕ್ಕೆ ವಿರುದ್ಧವಾಗಿದೆಯಂತೆ.

ಹೆಚ್-1ಬಿ ನೌಕರರ ಪೈಕಿ ಶೇ.80ರಷ್ಟು ಮಂದಿಗೆ ಸರಾಸರಿಗಿಂತ ತೀರಾ ಕಡಿಮೆ ಸಂಬಳವಿದೆ. ಶೇ.5ರಷ್ಟು ಮಂದಿ ಮಾತ್ರ ವೀಸಾ ನಿಯಮದಲ್ಲಿರುವ ಪ್ರಮಾಣದಲ್ಲಿ ಸಂಬಳ ಪಡೆಯುತ್ತಾರಂತೆ. ಇದರಿಂದಾಗಿ ಅಮೆರಿಕದ ಜನರು ಕೆಲಸ ಕಳೆದುಕೊಳ್ಳುವಂಥ ಸ್ಥಿತಿ ಬಂದಿದೆ. ಹೆಚ್-1ಬಿ ವೀಸಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಈ ಸಮಸ್ಯೆಗಳನ್ನು ನಿವಾರಿಸಬಹುದು ಎಂಬುದು ಟ್ರಂಪ್ ಸರಕಾರದ ಎಣಿಕೆ.

ಇದೇ ವೇಳೆ, ಹೆಚ್-1ಬಿ ವೀಸಾಗಳ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಅಮೆರಿಕ ಆರೋಪದ ಬಗ್ಗೆ ಭಾರತೀಯ ಕಂಪನಿಗಳು ಪ್ರತಿಕ್ರಿಯಿಸಲು ನಿರಾಕರಿಸಿವೆ.

Follow Us:
Download App:
  • android
  • ios