ಅತೃಪ್ತ ಶಾಸಕರ ನಡೆ, ಕಾಂಗ್ರೆಸ್ ಹೈ ಕಮಾಂಡ್ ಕಡೆ

First Published 9, Jun 2018, 4:31 PM IST
Upset congress leaders to meet Rahul Gandhi: Mallikarjun kharge
Highlights

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಲಿರುವ ಅತೃಪ್ತ ಶಾಸಕರು
ಎಂಬಿ ಪಾಟೀಲ್ ಭೇಟಿ ನಂತರ ರಾಹುಲ್ ಮನೆಗೆ ಉಳಿದ ಶಾಸಕರ ದೌಡು
ಸಂಪುಟ ರಚನೆಯ ಹಿಂದಿನ ಸತ್ಯ ಗೊತ್ತಾಗಲಿದೆ ಎಂದ ಮಲ್ಲಿಕಾರ್ಜುನ ಖರ್ಗೆ
ಅತೃಪ್ತರ ದೂರನ್ನು ಆಲಿಸಲಿರುವ ರಾಹುಲ್ ಗಾಂಧಿ
 

ದೆಹಲಿ [ಜೂನ್.9] : ಸಚಿವ ಸ್ಥಾನ ವಂಚಿತರಾಗಿರುವ ಕಾಂಗ್ರೆಸ್ ಅತೃಪ್ತ ಶಾಸಕರು ಕಾಂಗ್ರೆಸ್ ಹೈ-ಕಮಾಂಡ್ ರಾಹುಲ್ ಗಾಂಧಿಯನ್ನು ಭೇಟಿ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗೆ ಕೆಲವೊಮ್ಮೆ ಕೆಲವನ್ನು ತ್ಯಾಗ ಮಾಡಬೇಕಾಗುತ್ತೆ. ಈ ಅತೃಪ್ತರ ದೂರನ್ನು ಹೈ-ಕಮಾಂಡ್ ಆಲಿಸಲಿದೆ. ಯಾವ ಅತೃಪ್ತ ಶಾಸಕನಿಗೂ ಕಾಂಗ್ರೆಸ್ ತೊರೆಯುವ ಮನಸ್ಸಿಲ್ಲ. ಭೇಟಿ ವೇಳೆ ಸಚಿವ ಸಂಪುಟ ವೇಳೆ ತೆಗೆದುಕೊಂಡ ತೀರ್ಮಾನದ ಹಿಂದಿನ ನಿಜ ಕಾರಣವೂ ಅವರಿಗೆ ಅರಿವಾಗಲಿದೆ ಎಂದು ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಸಚಿವ ಸಂಪುಟ ರಚನೆ ವೇಳೆ  ಸ್ಥಾನ ವಂಚಿತರಾಗಿದ್ದ ಕಾಂಗ್ರೆಸ್ ಶಾಸಕರು ಬಂಡಾಯದ ಬಾವುಟ ಹಾರಿಸಿದ್ದರು. ಸಿದ್ದರಾಮಯ್ಯ ಸರಕಾರದಲ್ಲಿ ಪ್ರಭಾವಿ ಸಚಿವರೆಂದು ಕರೆಸಿಕೊಂಡಿದ್ದ ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ರಾಮಲಿಂಗಾ ರೆಡ್ಡಿ, ರೋಶನ್ ಬೇಗ್, ಎಚ್.ಕೆ.ಪಾಟೀಲ್, ತನ್ವೀರ್ ಸೇಠ್ ಮತ್ತು ಶಾಮನೂರು ಶಿವಶಂಕರಪ್ಪ , ಸತೀಶ್ ಜಾರಕಿಹೊಳಿ ಸಚಿವ ಸ್ಥಾನ ವಂಚಿತರಾಗಿದ್ದು ರಾಜೀನಾಮೆ ನೀಡುವ ಮಾತನ್ನು ಆಡಿದ್ದರು.

ನಾನು ಕಾಂಗ್ರೆಸ್ ಕಟ್ಟಾಳು, ಬಿಜೆಪಿಗೆ ಹೋಗಲ್ಲ:  ದೆಹಲಿಯಲ್ಲಿ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಅತೃಪ್ತ ಶಾಸಕ ಎಂ.ಬಿ.ಪಾಟೀಲ್, ನಾನು ಬಿಜೆಪಿ ಸಂಪರ್ಕದಲ್ಲಿ ಇಲ್ಲ, ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳು. ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ. ರಾಹುಲ್ ಗಾಂಧಿ ಬಳಿ ಡಿಸಿಎಂ ಪಟ್ಟಕ್ಕೆ ಬೇಡಿಕೆ ಇಟ್ಟಿಲ್ಲ.  ಕಾಯರ್ಕರ್ತರೊಂದಿಗೆ ಇನ್ನೊಂದು ಸುತ್ತಿನ ಸಭೆ ನಡೆಸುತ್ತೇನೆ ಎಂದಿದ್ದಾರೆ.

ನಾನು ಒಬ್ಬಂಟಿಯಲ್ಲ, ನನ್ನ ಬಳಿ ಸಾಕಷ್ಟು ಮಂದಿ ಇದ್ದಾರೆ.  ರಾಹುಲ್ ಗಾಂಧಿಗೆ ಎಲ್ಲವನ್ನೂ ಹೇಳಿದ್ದೇನೆ. ಖರ್ಗೆಯಿಂದ ಸಚಿವ ಸ್ಥಾನ ಕೈತಪ್ಪಿದ್ದು ಅನ್ನೋದು ಸುಳ್ಳು ನನಗೆ ಸಚಿವ ಸ್ಥಾನ ಕೈ ತಪ್ಪಲು ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಕಾರಣ ಅಲ್ಲ.  ನಾನು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ ಎಂದು ಪಾಟೀಲ್ ಹೇಳಿದ್ದಾರೆ.

loader