ದುರಂತ ನಾಟಕ ಹ್ಯಾಮ್ಲೆಟ್ ನಲ್ಲಿ ಬರುವ ಒಂದು ಸಾಲು ಹೀಗಿದೆ - ಶೇಕ್ಸ್ಪಿಯರ್ ಹೇಳುತ್ತಾನೆ. 
“The Play's the Thing, wherein I'll catch the conscience of the King.” ನಗಿಸುವ, ನಲಿಯುವ ಉದ್ದೇಶದ ಹಾಸ್ಯ ನಾಟಕಗಳನ್ನು ಹೊರತುಪಡಿಸಿದರೆ ನಾಟಕದ ಉದ್ದೇಶ ಮನರಂಜನೆ ಅಲ್ಲವೇ ಅಲ್ಲ. 

ನಾಟಕದ ವಸ್ತು, ವಿನ್ಯಾಸ ಹೇಗೂ ಇರಲಿ. ಕೌಟುಂಬಿಕ, ದುರಂತ, ಸಾಮಾಜಿಕ, ಪೌರಾಣಿಕ, ಹಾಸ್ಯ, ಯಾವುದೇ ಆಗಿರಲಿ, ನಾಟಕ ಎಂದಾಕ್ಷಣ ನಮಗೆ ರಂಗಭೂಮಿ, ಕಲಾವಿದರು, ನೆರಳು, ಬೆಳಕು, ವೇಷ ಭೂಷಣ, ನೇಪಥ್ಯ, ನೆನಪಾಗುವುದು ಸಹಜ. 

ಸಿನಿಮಾ , ಟಿವಿ ಯುಗ ಬಂದಮೇಲಂತೂ ನಾಟಕ ಆಡುವವರೂ ಕಡಿಮೆ, ನೋಡುವವರೂ ಕಡಿಮೆ. ವೃತ್ತಿ ರಂಗಭೂಮಿ ಹೇಳಹೆಸರಿಲ್ಲದೆ ಹೋಯಿತು. ಹವ್ಯಾಸಿ ರಂಗಭೂಮಿ ನಗರವಾಸಿ ಶ್ರೀಮಂತವರ್ಗಕ್ಕೆ ಮಾತ್ರ ಎಂಬ ಅಭಿಪ್ರಾಯ ಬಂದುಬಿಟ್ಟಿದೆ.  ಈ ನಾಟಕಗಳೂ ಅಷ್ಟೆ. ಒಂದು ಪ್ರಯೋಗಕ್ಕೆ ಮೀಸಲು. ಅಮೋಘ 25ನೇ ದಿನ, ಅಮೋಘ ಆರನೇ ವಾರ ಅಂತ ಎಲ್ಲಾದರೂ ಕನ್ನಡ ನಾಟಕ ನಕಾಶೆಯಲ್ಲಿ ಕೇಳಿದೀರಾ? 

ನಾಟಕ ನಿಜಕ್ಕೂ ಉಳಿದಿದ್ದರೆ ಅದು ಗ್ರಾಮಾಂತರ ಪ್ರದೇಶದಲ್ಲಿ. ಹಳ್ಳಿಯ ಕಲಾವಿದರೆಲ್ಲ ಕಲೆತು ಒಂದು ಸಂಘ ಕಟ್ಟಿಕೊಳ್ಳುತ್ತಾರೆ. ಬೇಸಾಯ ಚಟುವಟಿಕೆ ಇಲ್ಲದ ಋತುವಿನಲ್ಲಿ ಸುತ್ತ ನಾಕು ಹಳ್ಳಿಯ ಹಬ್ಬ, ಜಾತ್ರೆಯಲ್ಲಿ ನಾಟಕ ಪ್ರದರ್ಶಿಸುತ್ತಾರೆ.  ಹಾಗೆ ಪ್ರದರ್ಶಿತವಾಗುವ ಜನಪ್ರಿಯ ನಾಟಕಗಳಲ್ಲಿ ಶ್ರೀಕೃಷ್ಣ ಸಂಧಾನಕ್ಕೆ ಪ್ರಥಮ ಬಹುಮಾನ!

ಇನ್ನು ಕನ್ನಡ ಶಾಲೆಗಳಲ್ಲಿ ಕನ್ನಡ ನಾಟಕಗಳು ಇನ್ನೂ ಉಳಕೊಂಡಿವೆ ಎನ್ನುವುದು ಸಂತಸದ ಸಂಗತಿ.  ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆಯುವ ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಇದಕ್ಕೆ ಉದಾಹರಣೆ. ವಿದ್ಯಾರ್ಥಿ ಸಮುದಾಯದಲ್ಲಿ ಸಾಮಾಜಿಕ ಎಚ್ಚರಕ್ಕೆ ವಿಜ್ಞಾನ ಸ್ಪರ್ಷ ನೀಡುವ ಇಂತಹ ನಾಟಕ ಕಲೆ ಇನ್ನೂ ಎತ್ತರಕ್ಕೆ ಬೆಳೆಯಲಿ.....
****************************************************

ಬೆಂಗಳೂರು(ನ.06) ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್-district institute of education and training) ಸಹಯೋಗದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ಪ್ರಥಮ ಸ್ಥಾನ ಪಡೆದಿದೆ.

ದಾವಣಗೆರೆಯ ಡಯಟ್ಸ್ ನ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಸ್ಫರ್ಧೆಯಲ್ಲಿ ವಿದ್ಯಾಲಯದ ‌ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ "ಕನಸ ಕಂಗಳು" ನಾಟಕ ಪ್ರಥಮ ಬಹುಮಾನ ಪಡೆಯಿತು.

ಸ್ವಚ್ಛತೆ,ಆರೋಗ್ಯ,ನೈರ್ಮಲ್ಯ ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳು ಈ ನಾಟಕ ಪ್ರಸ್ತುತ ಪಡಿಸಿದ್ದಾರೆ.ಆಹಾರ,ಮಾದಕದ್ರವ್ಯಗಳು ವಿದ್ಯಾರ್ಥಿ ಸಂಕುಲವನ್ನು ಕಾಡುವ ಕುರಿತಾದ ಎಚ್ಚರಿಕೆಯನ್ನು ನಾಟಕ ವಿವರಿಸುತ್ತದೆ.

ಯಕ್ಷಗಾನದ ನಾಟ್ಯ,ಭಾವಗೀತೆಗಳ‌ ಸಂಯೋಜನೆಯ ಮೂಲಕ ನಾಟಕವನ್ನು ನಿರೂಪಿಸಲಾಗಿದೆ.ಬಣ್ಣಗಾರಿಕೆಯ ಕನಿಷ್ಠ ಬಳಕೆ, ಕಡಿಮೆವ ಕಾಸ್ಟ್ಯೂಮ್ ಗಳು,ಹಿತಮಿತ ಬೆಳಕಿನ ಸಂಯೋಜನೆ ಈ ನಾಟಕದ ತಾಂತ್ರಿಕತೆಯಲ್ಲೂ ವಿಶಿಷ್ಟತೆಯನ್ನು ಕಾಪಾಡಿದೆ ಇಡೀ ರಂಗವನ್ನು ಪಾತ್ರಧಾರಿ ವಿದ್ಯಾರ್ಥಿಗಳೇ ನಿರ್ವಹಿಸಿದ್ದು ಮತ್ತೊಂದು ‌ವಿಶೇಷವಾಗಿದೆ.

ವಿದ್ಯಾಲಯದ ಅಧ್ಯಾಪಕ ಸದಾಶಿವ ಭಟ್ ಅತ್ಯುತ್ತಮ ‌ನಿರ್ದೇಶಕ ಪ್ರಶಸ್ತಿ ಪಡೆದರೆ,ವಿದ್ಯಾರ್ಥಿ ಅನುಪಮ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ನಾಟಕದಲ್ಲಿ ತನ್ವೀ ಜಿ.ಕೆ.,ವರ್ಷಿಣಿ ರೈ, ಶಿವಾನಿ,ಸಮರ್ಥ, ಅನ್ವಿತಾ, ಲಿಪಿ ಗೌಡ,ಶರಣ್ಯ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ದಕ್ಷಿಣ ಭಾರತ ಮಟ್ಟದ ಸ್ಫರ್ಧೆ ನವಂಬರ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ.