ರಾಜಕೀಯ ಪಕ್ಷ ಹುಟ್ಟು ಹಾಕಿದ ಬಳಿಕ ಕಾರಣಾಂತರಗಳಿಂದ ರಾಜಕಾರಣ ದಿಂದ ದೂರ ಉಳಿದಿದ್ದ ರಿಯಲ್ ಸ್ಟಾರ್ ನಟ ಉಪೇಂದ್ರ ಇದೀಗ ಮತ್ತೊಮ್ಮೆ ರೀ ಎಂಟ್ರಿ ಕೊಡುತ್ತಿದ್ದಾರೆ. 

ಬೆಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭು ಎಂಬ ಪರಿಕಲ್ಪನೆಯಲ್ಲಿ ರಾಜಕೀಯಕ್ಕೆ ಪರ್ಯಾಯವಾಗಿ ‘ಪ್ರಜಾಕೀಯ’ ಘೋಷಣೆಯೊಂದಿಗೆ ರಾಜಕೀಯ ಪಕ್ಷ ಹುಟ್ಟು ಹಾಕಿದ ಬಳಿಕ ಕಾರಣಾಂತರಗಳಿಂದ ರಾಜಕಾರಣ ದಿಂದ ದೂರ ಉಳಿದಿದ್ದ ರಿಯಲ್ ಸ್ಟಾರ್ ನಟ ಉಪೇಂದ್ರ ಇದೀಗ ಮತ್ತೊಮ್ಮೆ ರೀ ಎಂಟ್ರಿ ಕೊಡುತ್ತಿದ್ದಾರೆ. 

ತಮ್ಮ ಹುಟ್ಟುಹಬ್ಬದ ದಿನದಂದು ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ. ಸೆ.18ರಂದು ಪ್ರಜಾಕೀಯ ವ್ಯವಸ್ಥೆಯನ್ನು ತರಲು ಉತ್ತಮ ಪ್ರಜಾಕೀಯ ಪಾರ್ಟಿಯನ್ನು (ಯುಪಿಪಿ) ಲೋಕಾರ್ಪಣೆ ಮಾಡಲಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ ರಾಜಕೀಯ ವ್ಯವಸ್ಥೆಯನ್ನು ಅಳಿಸಿ ಸಂಪೂರ್ಣ ಪಾರದರ್ಶಕ ಆಡಳಿತ, ಭ್ರಷ್ಟಾಚಾರ ರಹಿತ ಆಡಳಿತ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಜಾಕೀಯ ವ್ಯವಸ್ಥೆಯನ್ನು ತರಲು ಉತ್ತಮ ಪ್ರಜಾಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಸೆ. 18ರಂದು ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಕೆಪಿಜೆಪಿಯಲ್ಲಿ ಹಿನ್ನಡೆ: ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಜಕೀಯಕ್ಕೆ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ (ಕೆಪಿಜೆಪಿ) ಮೂಲಕ ಪ್ರವೇಶಿಸಿದ್ದರು. ವಿಧಾನಸಭೆ ಚುನಾವಣೆಗೆ ತಾವು ಸೇರಿದಂತೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆಯನ್ನು ಸಹ ನಡೆಸಿದ್ದರು. ಆದರೆ, ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಅವರೊಂದಿಗಿನ ಮನಸ್ತಾಪದಿಂದಾಗಿ ಮತ್ತು ಅವರ ನಡೆಯಿಂದ ಬೇಸತ್ತು ಮಾ. 5ರಂದು ಪಕ್ಷದಿಂದ ಹೊರಬಂದಿದ್ದರು.

ಕೆಪಿಜೆಪಿಯಿಂದ ಹೊರಬಂದ ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷ ಎನ್ನುವ ಹೆಸರನ್ನು ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಾಯಿಸಿದ್ದರು. ಉತ್ತಮ ಪ್ರಜಾಕೀಯ ಪಕ್ಷದ ಮೂಲಕ ವಿಧಾನಸಭಾ ಚುನಾವಣೆಗೆ ನಡೆದ ಸಿದ್ಧತೆಗಳ ಪರಿಕಲ್ಪನೆಗಳನ್ನೇ ಮುಂದುವರಿಸಿಕೊಂಡು ಹೋಗಲಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ಸಂದರ್ಶನ ಮತ್ತು ಅವರ ಕ್ಷೇತ್ರದ ಸಮಸ್ಯೆಗಳೇನು, ಅದಕ್ಕೆ ಪರಿಹಾರ ಎನ್ನುವ ಸಂಕ್ಷಿಪ್ತ ವರದಿಯನ್ನು ಆಧರಿಸಿ ಪಕ್ಷವನ್ನು ಕಟ್ಟುವ ಉದ್ದೇಶ ಹೊಂದಿದ್ದಾರೆ. ಹೊಸ ಪಕ್ಷ ಲೋಕಾರ್ಪಣೆ ಮಾಡುತ್ತಿರುವುದರಿಂದ ಉಪೇಂದ್ರ ಅಭಿಮಾನಿಗಳಿಗೆ ಮತ್ತು ಬೆಂಬಲಿಗರಿಗೆ ಮತ್ತೊಂದು ಅವಕಾಶ ಸಿಗಲಿದೆ. 

ತಾರೆಯರ ಸಾಥ್?: ಉಪೇಂದ್ರ ಅವರ ಹೊಸ ಪಕ್ಷಕ್ಕೆ ತಾರಾರಂಗು ಬರುವ ಸಾಧ್ಯತೆಯೂ ಇದೆ. ಕನ್ನಡ ಚಿತ್ರತಾರೆಯರು ಉಪೇಂದ್ರ ಅವರೊಂದಿಗೆ ಕೈ ಜೋಡಿಸಿ ಪಕ್ಷವನ್ನು ಕಟ್ಟಲಿದ್ದಾರೆ ಎಂದು ಹೇಳಲಾಗಿದೆ. ಕೆಪಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ನಟ-ನಟಿಯರು ಉತ್ತಮ ಪ್ರಜಾಕೀಯ ಪಾರ್ಟಿಗೆ ಸೇರಲಿದ್ದಾರೆ ಎನ್ನಲಾಗಿದೆಯಾದರೂ ಅಧಿಕೃತವಾಗಿ ಯಾರು ಸೇರ್ಪಡೆಯಾಗಲಿದ್ದಾರೆ ಎಂಬುದು ಪಕ್ಷ ಅಧಿಕೃತವಾಗಿ ಲೋಕಾರ್ಪಣೆಯಾದ ಬಳಿಕವಷ್ಟೇ ಗೊತ್ತಾಗಲಿದೆ.