ಬೆಂಗಳೂರು :  ನಮ್ಮ ಕನ್ನಡ ಚಿತ್ರರಂಗದ ರೆಬೆಲ್‌ ಸ್ಟಾರ್‌, ಎಲ್ಲರ ಪ್ರೀತಿಯ ಅಮರನಾಥ್‌, ಪುಟ್ಟಣ್ಣ ಕಣಗಾಲ್‌ ಅವರ ಮುದ್ದಿನ ಶಿಷ್ಯ ಜಲೀಲನ ಬಗ್ಗೆ ಬರೆಯಿರಿ ಅಂದರೆ ಏನಂತ ಬರೆಯಲಿ? ಅಂಬರೀಷ್‌ ಎಂದರೆ ತೆರೆದ ಪುಸ್ತಕ. ಅವರು ಒಂಥರಾ ಲೈಬ್ರರಿ ಇದ್ದಂತೆ. ಯಾರನ್ನು ಬೇಕಾದರೂ ತನ್ನೊಳಗೆ ಬಿಟ್ಟುಕೊಂಡು ಓದಿಕೋ ಅಂತ ಹೇಳುವಂತೆ ಅಂಬರೀಷ್‌ ಕೂಡ ಯಾರನ್ನೂ ದೂರ ಇಟ್ಟವರಲ್ಲ. ಯಾರ ಮುಖವೂ ಅವರಿಗೆ ಅಪರಿಚಿತವಲ್ಲ. ಎಲ್ಲರೂ ಪರಿಚಿತರೇ. ಎಲ್ಲರಿಗೂ ತಮ್ಮ ಜೀವನ ಪ್ರೀತಿಯನ್ನು ಹಂಚಿದವರು. ಹೀಗಾಗಿ ಅವರ ಬಗ್ಗೆ ಏನೇ ಬರೆಯಬೇಕು ಅಂತ ಹೊರಟರೂ ಎಲ್ಲವೂ, ಎಲ್ಲರಿಗೂ ಗೊತ್ತಿದೆ ಎಂದು ನಟ ಉಪೇಂದ್ರ ಹೇಳಿದ್ದಾರೆ. 

ನನಗೆ ಅಂಬರೀಷ್‌ ಅವರ ಹತ್ತಿರದ ಸ್ನೇಹ ಮತ್ತು ಒಡನಾಟ ಸಿಕ್ಕಿದ್ದು ನಿರ್ದೇಶಕನಾಗಿ. ಕನ್ನಡ ಚಿತ್ರರಂಗದಲ್ಲಿ ‘ಅಂತ’ ಚಿತ್ರದ್ದು ಮೈಲುಗಲ್ಲು. ಈ ಚಿತ್ರದ ಮುಂದುವರೆದ ಭಾಗ ನಾನು ನಿರ್ದೇಶಿಸುತ್ತೇನೆ ಎಂದು ಅಂಬರೀಷ್‌ ಅವರ ಬಳಿಗೆ ಕತೆ ಹೇಳೋಣ ಅಂತ ಹೋದೆ. ಇವರು ಕತೆ ಕೇಳ್ತಾರೋ ಇಲ್ವೋ ಎನ್ನುವ ಅನುಮಾನದಲ್ಲೇ ಹೋದೆ. ಆದರೆ, ನನ್ನ ಊಹೆಗೂ ಮೀರಿ ತುಂಬಾ ಗಂಭೀರವಾಗಿ ಕೂತು ಕತೆ ಕೇಳಿದರು. ಅಂಬರೀಷ್‌ ಅವರು ನಿರ್ದೇಶಕನ ಮುಂದೆ ಕೂತರೆ ಒಬ್ಬ ವಿದ್ಯಾರ್ಥಿಯಂತಾಗುತ್ತಾರೆ ಎಂಬುದನ್ನು ನಾನು ‘ಅಪರೇಷನ್‌ ಅಂತ’ ಸಿನಿಮಾದ ಕತೆ ಹೇಳಿದಾಗ ನೇರವಾಗಿ ಕಂಡೆ.

ಅವರಿಗೆ ನನ್ನ ಕತೆ ಇಷ್ಟವಾಯಿತು. ಕನ್ವರ್‌ಲಾಲ್‌ ಎನ್ನುವ ಕ್ಯಾರೆಕ್ಟರನ್ನು ಒಬ್ಬ ಎನ್‌ಆರ್‌ಐ ಹುಡುಗಿ ಆಚೆ ಕರೆದುಕೊಂಡು ಬರುವ ದೃಶ್ಯವನ್ನು ಕೇಳಿಯೇ ತುಂಬಾ ಮೆಚ್ಚಿಕೊಂಡರು. ಹಾಗೆ ನನಗೆ ಅವರ ಒಡನಾಟ ಸಿಕ್ಕಿತು. ಕಲಾವಿದ ಅನ್ನೋನು ನಿರ್ದೇಶಕನ ವಿದ್ಯಾರ್ಥಿ ಎಂಬುದನ್ನು ನಾನು ಅಂಬರೀಷ್‌ ಅವರನ್ನು ನೋಡಿಯೇ ತಿಳಿದವನು. ಯಾಕೆಂದರೆ ಕೆಲವೊಮ್ಮೆ ರಾತ್ರಿ 12 ಗಂಟೆವರೆಗೂ ಚಿತ್ರೀಕರಣ ಮಾಡುತ್ತಿದ್ದರೂ ಒಂದೇ ಒಂದು ಮಾತೂ ಆಡದೆ ನಿರ್ದೇಶಕ ಹೇಳಿದಂತೆ ನಟಿಸುತ್ತಿದ್ದರು. ಮೇಕಪ್‌ ಹಾಕಿಕೊಂಡ ಮೇಲೆ ನಿರ್ದೇಶಕ ಬಂದು ಪ್ಯಾಕಪ್‌ ಹೇಳುವ ತನಕ ಅಂಬರೀಷ್‌ ಅಪ್ಪಟ ವಿದ್ಯಾರ್ಥಿ. ಯಾವಾಗ ಪ್ಯಾಕಪ್‌ ಅಂತೀವೋ ಆಗ ನಿಜವಾದ ರೆಬೆಲ್‌ ಅಂಬರೀಷ್‌ ಆಚೆ ಬರುತ್ತಾರೆ.

ನಾನು ‘ಅಪರೇಷನ್‌ ಅಂತ’ ಚಿತ್ರ ಮಾಡುವಾಗ ‘ಇದು ಲಾಸ್ಟ್‌ ಸೀನ್‌. ತುಂಬಾ ತಡವಾಗುತ್ತದೆ. ಆದರೂ ಮಾಡಲೇಬೇಕು’ ಎಂದು ಹೇಳಿ ಮೇಕಪ್‌ ಹಾಕಿಸುವಾಗ ಏನೂ ಮಾತನಾಡದ ವ್ಯಕ್ತಿ, ಮೇಕಪ್‌ ತೆಗೆದಕೂಡಲೇ, ‘ಅಯ್ಯೋ ಬೇಗ ಮುಗಿಸ್ರಪ್ಪ. ಏನ್‌ ನಾಳೆನೇ ರೀಲೀಸ್‌ ಮಾಡಿಬಿಡ್ತಿರಾ?’ ಅಂತ ತಮಾಷೆ ಮಾಡೋರು. ಹೀಗೆ ನಾನು ಅಂಬರೀಷ್‌ ಅವರಲ್ಲಿ ಎರಡು ವ್ಯಕ್ತಿತ್ವಗಳನ್ನು ಕಂಡಿದ್ದೇನೆ. ಸಿಕ್ಕಾಪಟ್ಟೆಜಾಲಿಯಾಗಿ ಇರುತ್ತಾರೆ. ತುಂಬಾ ನಗಿಸುತ್ತಾರೆ. ತಾವೇ ಮುಂದೆ ನಿಂತು ಎಲ್ಲರಿಗೂ ಏನು ಬೇಕೋ ಅದನ್ನು ಕೊಡಿಸುತ್ತಾರೆ. ಸಿನಿಮಾ ಸೆಟ್‌ನಲ್ಲಿ ಅಂಬರೀಷ್‌ ಇದ್ದರೆ ಅದೇ ಒಂದು ದೊಡ್ಡ ಹಬ್ಬ. ಪ್ರತಿ ಕ್ಷಣವನ್ನು ಸಂಭ್ರಮದಿಂದ ಬದುಕಿದ ವ್ಯಕ್ತಿ ಅಂದರೆ ಅದು ಕೇವಲ ಅಂಬರೀಷ್‌ ಮಾತ್ರ.

ಅಂಬರೀಷ್‌ ಅವರ ಹಳೆಯ ಸಿನಿಮಾಗಳನ್ನು ಈ ಜನರೇಷನ್‌ಗೂ ತಲುಪಿಸಬೇಕು ಎಂಬ ಆಸೆ ಇತ್ತು. ‘ಅಂತ’ ಸಿನಿಮಾ ಬಿಟ್ಟರೆ ಮತ್ತೊಂದು ಪ್ರಮುಖ ಚಿತ್ರ ‘ಪ್ರೇಮ ಮತ್ಸರ.’ ‘ಇಲ್ಲೇ ಸ್ವರ್ಗ, ಇಲ್ಲೇ ನರಕ’ ಎನ್ನುವ ಹಾಡಿನ ಮೂಲಕವೇ ಮತ್ತೊಂದು ಕತೆ ಮಾಡುವಂತಿರುವ ಸಿನಿಮಾ ಇದು. ‘ಆಪರೇಷನ್‌ ಅಂತ’ ಚಿತ್ರದ ಮೂಲಕ ಅವತ್ತೇ ನಾನು ಸಮಾಜದಲ್ಲಿ ಒಂದು ಸಣ್ಣ ಭಯ ಇರಬೇಕು. ಜನಪ್ರತಿನಿಧಿಗಳು, ಸಾಮಾನ್ಯ ಜನರು ಈ ಇಬ್ಬರಲ್ಲಿ ಅಂಥ ಭಯ ಇದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಅಂತ ಹೇಳಿದ್ದೆ. ಇತ್ತೀಚೆಗೆ ಬಂದ ‘ಭರತ್‌ ಅನೆ ನೇನು’ ಎನ್ನುವ ಚಿತ್ರದ ಕತೆಯ ಸಾಲು ಕೂಡ ಇದೇ. ಹೀಗಾಗಿ ‘ಆಪರೇಷನ್‌ ಅಂತ’ ಚಿತ್ರದ ಕತೆ ಈ ಕ್ಷಣಕ್ಕೂ ಪ್ರಸ್ತುತ. ಹೀಗಾಗಿ ಅವಕಾಶ ಸಿಕ್ಕರೆ ಅಂಬರೀಷ್‌ ಅವರ ‘ಪ್ರೇಮ ಮತ್ಸರ’ ಹಾಗೂ ‘ಆಪರೇಷನ್‌ ಅಂತ’ ಚಿತ್ರಗಳನ್ನು ಮತ್ತೊಮ್ಮೆ ಮಾಡುವೆ.

ನಾನು ಈ ಮೊದಲೇ ಹೇಳಿದಂತೆ ಅಂಬರೀಷ್‌ ಅವರಿಗೆ ಶತ್ರುಗಳೇ ಇಲ್ಲ. ಸಿನಿಮಾ, ರಾಜಕೀಯ, ವ್ಯಾಪಾರೋದ್ಯಮ ಹೀಗೆ ಯಾವ ಕ್ಷೇತ್ರಗಳಲ್ಲೂ ಶತ್ರುಗಳನ್ನು ಇಟ್ಟಿಕೊಂಡಿರದ ನಿಜವಾದ ಅಜಾತಶತ್ರು ಅಂದರೆ ಅಂಬರೀಷ್‌. ಅವರು ಕಾಂಗ್ರೆಸ್‌ ಪಕ್ಷದಲ್ಲಿದ್ದವರು. ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿದ್ದವರು. ಪ್ರಭಾವಿ ವ್ಯಕ್ತಿ ಕೂಡ. ಆದರೆ, ತಮ್ಮದಲ್ಲದ ಪಕ್ಷಗಳ ಅಥವಾ ರಾಜಕೀಯ ವ್ಯಕ್ತಿಗಳ ವಿರುದ್ಧ ವೈಯಕ್ತಿಕ ಟೀಕೆ ಮಾಡಿದವರಲ್ಲ. ನಿಮಗೆ ಒಂದು ಘಟನೆ ಹೇಳಬೇಕಿದೆ. 

ಅಟಲ್‌ ಬಿಹಾರಿ ವಾಜಪೇಯಿ ಚುನಾವಣಾ ಕಣಕ್ಕಿಳಿದಾಗ ಅವರ ವಿರೋಧಿ ಪಕ್ಷದ ನಾಯಕರಾಗಿದ್ದ ನೆಹರು ಅವರು ವಾಜಪೇಯಿ ಸ್ಪರ್ಧಿಸುತ್ತಿದ್ದ ಕ್ಷೇತ್ರಕ್ಕೆ ಚುನಾವಣೆಯ ಪ್ರಚಾರಕ್ಕೂ ಹೋಗಲಿಲ್ಲ. ಆಗ ಅವರು ಹೇಳಿದ್ದೇನು ಗೊತ್ತೇ, ‘ವಾಜಪೇಯಿ ಅವರಲ್ಲಿ ಒಳ್ಳೆಯ ವಿಚಾರಗಳಿವೆ. ಇಂಥ ವ್ಯಕ್ತಿಗಳು ರಾಜಕಾರಣಕ್ಕೆ ಬರಬೇಕು.’ ವಿಚಾರಗಳ ಮೂಲಕ ವಿರೋಧಿಗಳನ್ನೂ ಗೌರವಿಸುತ್ತಿದ್ದ ನೆಹರು ಅವರಂತೆಯೇ ನಮ್ಮ ಅಂಬರೀಷ್‌ ಕೂಡ. ಎಲ್ಲ ಪಕ್ಷಗಳಲ್ಲೂ ಅವರಿಗೆ ಸ್ನೇಹಿತರಿದ್ದಾರೆ. ಯಾರನ್ನೂ ವೈಯಕ್ತಿಕವಾಗಿ ಟೀಕಿಸಿದವರಲ್ಲ. ವಿಚಾರಗಳ ನಡುವೆ ಸಂಘರ್ಷ ನಡೆಯಬೇಕೇ ಹೊರತು ಅದು ವೈಯಕ್ತಿಕ ಮಟ್ಟಕ್ಕಿಳಿಯಬಾರದು ಎನ್ನುವ ಮಹತ್ತರವಾದ ಸತ್ಯವನ್ನು ಹೇಳಿದ ಅಂಬರೀಷ್‌ ಅವರ ರಾಜಕಾರಣ ಜನರ ನಡುವೆ ಪ್ರಜಾಕೀಯ ಕಟ್ಟಲಿಕ್ಕೆ ಹೊರಟಿರುವ ನನ್ನಂಥವನಿಗೂ ಮಾರ್ಗದರ್ಶನ.

ನಟನೆ ಜತೆಗೆ ಪ್ರಜಾಕೀಯ ಪಾರ್ಟಿ ಕಟ್ಟುವ ಯೋಚನೆ ಪ್ರಕಟಿಸಿದ ಮೇಲೆ ‘ಏನಪ್ಪ ಪ್ರಜಾಕೀಯ...’ ಅಂತ ತುಂಬಾ ರಾಗವಾಗಿ ಕೂಗುತ್ತ ತಮಾಷೆ ಮಾಡುತ್ತಿದ್ದರು. ಜತೆಗೆ ‘ನೀನು ಹೇಳುತ್ತಿರುವುದು ಸತ್ಯ ಕಣಪ್ಪ. ಬದಲಾವಣೆ ಜನರಿಂದ ಆಗಬೇಕು. ನಿನ್ನ ವಿಚಾರಗಳು ತಡವಾಗಿ ಜನಕ್ಕೆ ಅರ್ಥವಾಗಬಹುದು. ಆದರೆ, ಇದೇ ಸರಿಯಾದ ದಾರಿ’ ಎಂದು ನನಗೆ ಉತ್ಸಾಹ ತುಂಬಿದರು. ಸಿನಿಮಾ, ರಾಜಕೀಯ, ಸ್ನೇಹ, ನಟನೆ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ಅಂಬರೀಷ್‌, ಪ್ರತಿಯೊಬ್ಬರ ಪಾಲಿನ ಲೈಬ್ರರಿ. ವಿ ಮಿಸ್‌ ಯೂ ಅಂಬರೀಷಣ್ಣ ಅನ್ನೋಕ್ಕಿಂತ ವಿ ಲವ್‌ ಯೂ ಕರ್ಣ ಅನ್ನೋದು ಸೂಕ್ತ ಎಂದು ಅಂಬಿಯೊಂದಿಗಿನ ಹಲವು ನೆನಪುಗಳನ್ನು ಮೆಲುಕು ಹಾಕಿ ಭಾವುಕರಾಗಿದ್ದಾರೆ.