* ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಪಕ್ಷದ ಹೆಸರು ಬಹಿರಂಗ* ಕೆಪಿಜೆಪಿ: ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ* ಆಟೋರಿಕ್ಷಾ, ಚಪ್ಪಲಿ ಸೇರಿದಂತೆ 3 ಚಿಹ್ನೆಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿರುವ ಉಪ್ಪಿ

ಬೆಂಗಳೂರು(ಅ. 31): ಎರಡು ತಿಂಗಳ ಹಿಂದೆ ಪ್ರಜಾಕೀಯವೆಂಬ ಹೊಸ ಆಯಾಮದಲ್ಲಿ ಹೊಸ ಪಕ್ಷ ಕಟ್ಟುವ ಘೋಷಣೆ ಮಾಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಇಂದು ಹೊಸ ಪಕ್ಷದ ಹೆಸರನ್ನು ಬಹಿರಂಗಪಡಿಸಿದ್ದಾರೆ. ಕೆಪಿಜೆಪಿ - ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷವು ಉಪೇಂದ್ರರವರ ಹೊಸ ಪಕ್ಷದ ಹೆಸರಾಗಿದೆ. ನಗರದ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಿಯಲ್ ಸ್ಟಾರ್ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಟೋರಿಕ್ಷಾಗೆ ಉಪ್ಪಿ ಪಟ್ಟು?
ತಮ್ಮ ಪಕ್ಷದ ಚಿಹ್ನೆಯು ಕಾರ್ಮಿಕರು ಮತ್ತು ಕೆಳವರ್ಗದವರನ್ನು ಬಿಂಬಿಸುವಂತಿರಬೇಕು ಎಂಬುದು ಉಪೇಂದ್ರ ಅವರ ಯೋಜನೆ. ಈ ನಿಟ್ಟಿನಲ್ಲಿ ತಮ್ಮ ನೂತನ ಪಕ್ಷಕ್ಕಾಗಿ ಉಪೇಂದ್ರ 3 ಚಿಹ್ನೆಗಳನ್ನು ಸಿದ್ಧ ಮಾಡಿದ್ದಾರೆ. ಆಟೋರಿಕ್ಷಾ, ಚಪ್ಪಲಿ ಒಳಗೊಂಡಂತೆ ಆ 3 ಚಿಹ್ನೆಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ್ದಾರೆ. ಆಟೋರಿಕ್ಷಾ ಚಿಹ್ನೆ ಬಗ್ಗೆ ಉಪೇಂದ್ರರಿಗೆ ಮೊದಲ ಆದ್ಯತೆ ಇದೆ ಎನ್ನಲಾಗಿದೆ.

ಎರಡು ತಿಂಗಳಿನಿಂದ ಉಪೇಂದ್ರ ಅವರು ತಮ್ಮ ಹೊಸ ಪಕ್ಷದ ಧ್ಯೇಯೋದ್ದೇಶಗಳನ್ನು ರೂಪಿಸಲು ನಿರಂತರ ಶ್ರಮ ಹಾಕಿದ್ದಾರೆ. ವಿವಿಧ ಕ್ಷೇತ್ರಗಳ ಪರಿಣತರೊಂದಿಗೆ ಕೂತು ಸಮಾಲೋಚನೆ ಮಾಡಿ ತಮ್ಮ ಪಕ್ಷಕ್ಕೆ ರೂಪುರೇಷೆ ರಚಿಸಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ, ಪ್ರಜೆಯೇ ರಾಜ ಎಂದು ತಿಳಿದು ಕಾರ್ಮಿಕನಂತೆ ಕೆಲಸ ಮಾಡುವ ಜನಪ್ರತಿನಿಧಿಗಳನ್ನು ನೀಡುವುದು ಉಪೇಂದ್ರ ಅವರ ಚಿಂತನೆಯಾಗಿದೆ.