ಕೆಎಂಎಫ್ ತನ್ನ ಪ್ರಸಿದ್ಧ ನಂದಿನಿ ಬ್ರ್ಯಾಂಡ್‌ನ ತುಪ್ಪ, ಬೆಣ್ಣೆ ಮತ್ತು ಪನ್ನೀರ್ ಬೆಲೆಗಳನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ನವೆಂಬರ್ 4 ರಿಂದಲೇ ನೂತನ ದರಗಳು ಜಾರಿಗೆ ಬಂದಿದ್ದು, ಸಾರ್ವಜನಿಕರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಹೊರೆಯಾಗಿದೆ.

ಬೆಂಗಳೂರು (ನ.4): ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆಯ ಬಿಸಿಯಿಂದ ತತ್ತರಿಸಿರುವ ಕರ್ನಾಟಕದ ಸಾರ್ವಜನಿಕರಿಗೆ 'ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ' (KMF) ಮತ್ತೊಂದು ಭಾರಿ ಶಾಕ್ ನೀಡಿದೆ: ತನ್ನ ಪ್ರಸಿದ್ಧ 'ನಂದಿನಿ' (Nandini) ಬ್ರ್ಯಾಂಡ್‌ ನ ಉತ್ಪನ್ನಗಳಾದ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ಬೆಲೆಗಳನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದು, ನೂತನ ಪರಿಷ್ಕೃತ ದರಗಳು ನವೆಂಬರ್ 4 ರಿಂದಲೇ ಅಧಿಕೃತವಾಗಿ ಜಾರಿಗೆ ಬಂದಿವೆ. ಕೆಎಂಎಫ್‌ನ ನಂದಿನಿ ತುಪ್ಪಕ್ಕೆ ಹೋಲಿಸಿದರೆ ಗುಜರಾತ್‌ನ ಅಮೂಲ್‌ನ ಒಂದು ಲೀಟರ್‌ ತುಪ್ಪ ಕೆಜಿಗೆ 680 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಮೂಲ್‌ ನ.2 ರಿಂದ ಜಾರಿಯಾಗುವಂತೆ ತುಪ್ಪದ ಬೆಲೆ ಏರಿಕೆ ಮಾಡಿದ್ದು, ಏರಿಕೆಯ ಬಳಿಕ ಲೀಟರ್‌ ತುಪ್ಪದ ಬೆಲೆ 680 ರೂಪಾಯಿ ಆಗಿದೆ.

ದೇಶಾದ್ಯಂತ ಹಾಲು ಹಾಗೂ ಹಾಲಿನ ಉತ್ಪನ್ನಗಳ ಕಚ್ಚಾ ಸಾಮಗ್ರಿಗಳ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅಮುಲ್ ಸಂಸ್ಥೆ ಬೆಲೆ ಏರಿಕೆ ಮಾಡಿತ್ತು. ಇದೀಗ ಅದರ ಬೆನ್ನಲ್ಲೇ ಕೆಎಂಎಫ್ ಕೂಡ ತನ್ನ ನಂದಿನಿ ಪ್ರಮುಖ ಉತ್ಪನ್ನಗಳ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯನ್ನು (MRP) ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಕೆಎಂಎಫ್ ಪ್ರಕಟಿಸಿರುವ ಪರಿಷ್ಕೃತ ದರಗಳ ಪ್ರಕಾರ, ನಂದಿನಿ ತುಪ್ಪದ ಬೆಲೆಯಲ್ಲಿ ಲೀಟರ್‌ಗೆ ಬರೋಬ್ಬರಿ ₹100, ಬೆಣ್ಣೆ ಬೆಲೆಯಲ್ಲಿ ₹80 ಹಾಗೂ ಪನ್ನೀರ್ ಬೆಲೆಯಲ್ಲಿ ₹77 ರವರೆಗೆ ಹೆಚ್ಚಳ ಮಾಡಲಾಗಿದೆ.

ಪ್ರಮುಖ ಉತ್ಪನ್ನಗಳ ಬೆಲೆ ಏರಿಕೆಯ ಒಂದು ನೋಟ

  • ನಂದಿನಿ ತುಪ್ಪ: ಹಳೆಯ ಬೆಲೆ ₹750 ಇತ್ತು, ಇದೀಗ ₹850 ಕ್ಕೆ ಏರಿಕೆಯಾಗಿದೆ (₹100 ಹೆಚ್ಚಳ).
  • ನಂದಿನಿ ಬೆಣ್ಣೆ: ಹಳೆಯ ಬೆಲೆ ₹700 ಇತ್ತು, ಇದೀಗ ₹780 ಕ್ಕೆ ಏರಿಕೆಯಾಗಿದೆ (₹80 ಹೆಚ್ಚಳ).
  • ನಂದಿನಿ ಪನ್ನೀರ್: ಹಳೆಯ ಬೆಲೆ ₹408 ಇತ್ತು, ಇದೀಗ ₹485 ಕ್ಕೆ ಏರಿಕೆಯಾಗಿದೆ (₹77 ಹೆಚ್ಚಳ).

ನಂದಿನಿ ನೂತನ ಪರಿಷ್ಕೃತ ದರಪಟ್ಟಿ

ನಂದಿನಿ ತುಪ್ಪ (Ghee)

  • 1 ಲೀಟರ್ ಸ್ಯಾಚೆಟ್ (Sachet): ಹಳೆಯ ಬೆಲೆ ₹715 ರಿಂದ ₹850 ಕ್ಕೆ ಏರಿಕೆ.
  • 1 ಲೀಟರ್ ಪೆಟ್ ಜಾರ್ (Pet Jar): ಹಳೆಯ ಬೆಲೆ ₹735 ರಿಂದ ₹870 ಕ್ಕೆ ಏರಿಕೆ.
  • 15 ಕೆಜಿ ಟಿನ್ (Tin): ಹಳೆಯ ಬೆಲೆ ₹11,625 ರಿಂದ ಬರೋಬ್ಬರಿ ₹14,100 ಕ್ಕೆ ಏರಿಕೆ.

ನಂದಿನಿ ಬೆಣ್ಣೆ (Butter)

  • 500 ಗ್ರಾಂ ಉಪ್ಪು ಬೆಣ್ಣೆ (Salted Butter): ಹಳೆಯ ಬೆಲೆ ₹310 ರಿಂದ ₹380 ಕ್ಕೆ ಏರಿಕೆ.
  • 500 ಗ್ರಾಂ ಉಪ್ಪಿಲ್ಲದ ಬೆಣ್ಣೆ (Unsalted Butter): ಹಳೆಯ ಬೆಲೆ ₹330 ರಿಂದ ₹390 ಕ್ಕೆ ಏರಿಕೆ.
  • 200 ಗ್ರಾಂ ಉಪ್ಪಿಲ್ಲದ ಬೆಣ್ಣೆ (Unsalted Butter): ಹಳೆಯ ಬೆಲೆ ₹135 ರಿಂದ ₹160 ಕ್ಕೆ ಏರಿಕೆ.

ಬೆಣ್ಣೆ ಬ್ಲಿಸ್ಟರ್ ಪ್ಯಾಕ್ (Blister Pack): ಹಳೆಯ ಬೆಲೆ ₹80 ರಿಂದ ₹90 ಕ್ಕೆ ಏರಿಕೆ.

ಗೃಹಿಣಿಯರು ಹಾಗೂ ಸಣ್ಣ ವ್ಯಾಪಾರಿಗಳು ಕಂಗಾಲು

ಹಬ್ಬಗಳ ಸಾಲು ಸಾಲು ಆಚರಣೆಗಳ ಬೆನ್ನಲ್ಲೇ ನಂದಿನಿ ಹಾಲಿನ ಉತ್ಪನ್ನಗಳ ಬೆಲೆ ದಿಢೀರ್ ಏರಿಕೆಯಾಗಿರುವುದು ರಾಜ್ಯದ ಪ್ರತಿಯೊಂದು ಕುಟುಂಬದ ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ. ದಿನನಿತ್ಯ ನಂದಿನಿ ಬೆಣ್ಣೆ, ತುಪ್ಪ ಹಾಗೂ ಪನ್ನೀರ್ ಬಳಸುವ ಬೇಕರಿಗಳು, ಹೋಟೆಲ್‌ಗಳು ಹಾಗೂ ಸಣ್ಣ ಉಪಹಾರ ಗೃಹಗಳ ಮಾಲೀಕರಿಗೆ ಈ ನಿರ್ಧಾರ ಭಾರಿ ನಷ್ಟದ ಆತಂಕವನ್ನು ತಂದೊಡ್ಡಿದೆ. ನವೆಂಬರ್ 4 ರಿಂದಲೇ ಈ ನೂತನ ದರಗಳು ರಾಜ್ಯಾದ್ಯಂತ ಅನುಷ್ಠಾನಕ್ಕೆ ಬಂದಿದ್ದು, ಸರಣಿ ಬೆಲೆ ಏರಿಕೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.