ಗೋರಖ್‌ಪುರ[ಸೆ.13]: ಸರಸವಾಡುತ್ತಿದ್ದ ಹಾವುಗಳ ಮೇಲೆ ಗೊತ್ತಿಲ್ಲದೇ ಕುಳಿತ ಮಹಿಳೆಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿದ ದಾರುಣ ಘಟನೆ ಉತ್ತರಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಗೀತಾ ಎಂದು ಗುರುತಿಸಲಾಗಿದೆ.

ಗೀತಾ, ಥಾಯ್ಲೆಂಡ್‌ನಲ್ಲಿರುವ ತನ್ನ ಪತಿ ಜೈಸಿಂಗ್‌ ಯಾದವ್‌ ಜೊತೆ ಮಾತನಾಡುತ್ತಲೇ, ಮನೆಯಲ್ಲಿ ಹಾಸಿಗೆ ಮೇಲೆ ಕುಳಿತುಕೊಂಡಿದ್ದಾಳೆ. ಆದರೆ ಅದೇ ವೇಳೆ ಎರಡು ಹಾವುಗಳ ಅದೇ ಹಾಸಿಗೆ ಮೇಲೆ ಸರಸವಾಡುತ್ತಿದ್ದುದ್ದು ಆಕೆಯ ಗಮನಕ್ಕೆ ಬಂದಿಲ್ಲ. ಹಾಸಿಗೆ ಮೇಲೆ ಹಾಕಿದ್ದ ಬೆಡ್‌ಶೀಟ್‌ ಬಣ್ಣಬಣ್ಣ ಹೊಂದಿದ್ದ ಕಾರಣ, ಹಾವುಗಳ ಇರುವಿಕೆ ಆಕೆಗೆ ಗೊತ್ತಾಗಿಲ್ಲ. ಹೀಗಾಗಿ ಏನಾಗುತ್ತಿದೆ ಎಂದು ಗೊತ್ತಾಗುವುದರ ಒಳಗೆ ಹಾವು ಗೀತಾಗೆ ಕಚ್ಚಿದೆ.

ಕೆಲ ಕ್ಷಣಗಳಲ್ಲಿ ಆಕೆ ಅಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಬಳಿಕ ಗೀತಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ.

ಇಷ್ಟೆಲ್ಲಾ ಆದರೂ ಅಲ್ಲೇ ಸರಸವಾಡುತ್ತಿದ್ದ ಹಾವುಗಳನ್ನು ಕಂಡು ಕೋಪಗೊಂಡ ಸ್ಥಳಿಯರು ಹಾವುಗಳನ್ನು ಬಡಿದು ಕೊಂದು ಹಾಕಿದ್ದಾರೆ.