ಗೋರಖ್‌ಪುರ[ಮಾ.13]: ಯೂಟ್ಯೂಬ್‌ ಚಾನೆಲ್‌ ನೋಡಿಕೊಂಡು ನೋಡಿ ಸ್ವಯಂ ಹೆರಿಗೆಗೆ ಯತ್ನಿಸಿದ ಅವಿವಾಹಿತ ಮಹಿಳೆ ಹಾಗೂ ನವಜಾತ ಶಿಶು ಸ್ಥಳದಲ್ಲೇ ಸಾವನ್ನಪ್ಪಿದ ಕರುಣಾಜನಕ ಘಟನೆ ಸೋಮವಾರ ಗೋರಖ್‌ಪುರದ ಬಿಲಾಂದಪುರ ಪ್ರದೇಶದಲ್ಲಿ ನಡೆದಿದೆ.

ಮಹಿಳೆ ವಾಸವಿದ್ದ ಮನೆಯಿಂದ ರಕ್ತ ಹರಿದು ಬರುತ್ತಿದ್ದುದನ್ನು ಕಂಡು ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಮುರಿದು ನೋಡಿದಾಗ ಮಹಿಳೆ ಮತ್ತು ಮಗು ಸಾವನ್ನಪ್ಪಿದ್ದು ಕಂಡು ಬಂದಿದೆ.

ಪ್ರಾಥಮಿಕ ತನಿಖೆ ವೇಳೆ ಮಹಿಳೆ ಮೊಬೈಲ್‌ ಮೂಲಕ ಯೂಟ್ಯೂಬ್‌ನಲ್ಲಿ ಸುರಕ್ಷಿತ ಸ್ವಯಂ ಹೆರಿಗೆ ಕುರಿತು ಹೆಚ್ಚಿನ ವೀಕ್ಷಣೆ ನಡೆಸಿದ್ದು ಬೆಳಕಿಗೆ ಬಂದಿದೆ. ಈಕೆ ಅವಿವಾಹಿತೆಯಾಗಿದ್ದು, 4 ದಿನಗಳ ಹಿಂದಷ್ಟೇ ಈ ಮನೆಗೆ ಬಾಡಿಗೆ ಬಂದಿದ್ದಳು. ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಶವ ಹಸ್ತಾಂತರಿಸಲಾಗಿದೆ.