ಲಕ್ನೋ[ಮೇ.10]: ಉತ್ತರ ಪ್ರದೇಶದ ಬೇದೋಹಿಯಲ್ಲಿ ನಡೆದ ಘಟನೆಯೊಂದು ಬಹುತೇಕ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ. ಇಲ್ಲೊಬ್ಬ ತಂದೆ ತನ್ನ ಮಗನಿಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿವರ

ಬೇದೋಹಿ ಜಿಲ್ಲೆಯ ಸುರ್ಯಾವಾ ಠಾಣೆಯ ಗಾಂಧೀನಗರದಲ್ಲಿ ಶುಕ್ರವಾರದಂದು ಎರಡೂವರೆ ವರ್ಷದ ಪುಟ್ಟ ಅಹದ್ ಆಯತಪ್ಪಿ ಬಾವಿಗೆ ಬಿದ್ದಿದ್ದಾನೆ. ಈ ವೇಳೆ ತನ್ನ ಪುಟ್ಟ ಕಂದನನ್ನು ಕಾಪಾಡಲು ಬಾವಿಗಿಳಿದ ತಂದೆ 26 ವರ್ಷದ ತಂದೆ ನಸೀಮ್ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮಗು ಬದುಕುಳಿದಿದೆ.

ಪ್ರಕರಣದ ಕುರಿತಾಗಿ ಮಾಹಿತಿ ನೀಡಿರುವ ಇನ್ಸಪೆಕ್ಟರ್ ಸುನಿಲ್ ದತ್ತ್ ದುಬೆ 'ಎರಡೂವರೆ ವರ್ಷದ ಮಗು ಅಹದ್ ಮನೆ ಬಳಿ ಆಟವಾಡುತ್ತಿದ್ದ. ಈ ವೇಳೆ ಹತ್ತಿರದಲ್ಲಿದ್ದ ಬಾವಿಗೆ ಬಿದ್ದಿದ್ದಾನೆ. ಇದನ್ನು ಕಂಡ ಮನೆಯವರು ಕೂಗಾಡಲಾರಂಭಿಸಿದ್ದಾರೆ. ಇದನ್ನು ಕೇಳಿದ ನಸೀಮ್ ಹಗ್ಗದ ಸಹಾಯದಿಂದ ಬಾವಿಗಿಳಿಯುತ್ತಿದ್ದರು. ಆದರೆ ಅರ್ಧದಲ್ಲೇ ಹಗ್ಗ ತುಂಡಾದ ಪರಿಣಾಮ ನಸೀಮ್ ಬಾವಿಗೆ ಬಿದ್ದಿದ್ದಾನೆ' ಎಂದಿದ್ದಾರೆ. 

ಅಷ್ಟರಲ್ಲಾಗಲೇ ಘಟನಾ ಸ್ಥಳದಲ್ಲಿ ಜನರು ಸೇರಿದ್ದು, ಬಾವಿಗೆ ಬಿದ್ದಿದ್ದ ಮಗು ಹಾಗೂ ತಂದೆಯನ್ನು ಹೊರ ತೆಗೆದಿದ್ದಾರೆ. ಆದರೆ ತಲೆಗೆ ಗಂಭೀರ ಏಟು ಬಿದ್ದ ಪರಿಣಾಮ ನಸೀಮ್ ಸಾವನ್ನಪ್ಪಿದ್ದ. ಮಗು ಅಪಾಯದಿಂದ ಪಾರಾಗಿದೆ.