ಉನ್ನಾವ್‌[ಆ.17]: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿ, ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಕುಲ್‌ದೀಪ್‌ ಸೆಂಗರ್‌ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಒಟ್ಟೊಟ್ಟಿಗೆ ಪ್ರಕಟವಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ಥಳೀಯ ಬಿಜೆಪಿ ನಾಯಕರೊಬ್ಬರು ದಿನ ಪತ್ರಿಕೆಯೊಂದರಲ್ಲಿ ನೀಡಿದ ಜಾಹೀರಾತಿನಲ್ಲಿ ಈ ಅಚಾತುರ್ಯ ಉಂಟಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌ ಹಾಗೂ ಉತ್ತರ ಪ್ರದೇಶ ಸ್ಪೀಕರ್‌ ಹೃದಯ್‌ ನಾರಾಯಣ್‌ ದೀಕ್ಷಿತ್‌ ಚಿತ್ರದೊಂದಿಗೆ ಕುಲ್‌ದೀಪ್‌ ಸಿಂಗ್‌ ಸೆಂಗರ್‌ ಚಿತ್ರ ಕೂಡ ಇದ್ದು ವಿವಾದಕ್ಕೆ ಕಾರಣವಾಗಿದೆ. ಉಂಗೂ ನಗರ ಪಂಚಾಯತ್‌ ಅಧ್ಯಕ್ಷ ಅನೂಜ್‌ ಕುಮಾರ್‌ ದೀಕ್ಷಿತ್‌ ಈ ಜಾಹೀರಾತು ನೀಡಿದ್ದಾರೆ. ಇದರಿಂದ ಬಿಜೆಪಿಗೆ ಮುಜುಗರ ಉಂಟಾಗಿದ್ದು, ಇದೊಂದು ವೈಯಕ್ತಿಕ ಜಾಹೀರಾತು ಎಂದು ಅಂತರ ಕಾಯ್ದುಕೊಂಡಿದೆ.

ಬಂಗಾರ್‌ಮಾವು ಶಾಸಕ ಹಾಗೂ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆಯಾಗಿರವ ಸೆಂಗರ್‌ ಪತ್ನಿ ಸಂಗೀತ ಸಿಂಗ್‌ ಸೆಂಗಾರ್‌ ಚಿತ್ರ ಕೂಡ ಜಾಹಿರಾತಿನಲ್ಲಿ ಬಳಸಲಾಗಿದೆ. ಸೆಂಗರ್‌ಗೆ ಆದಷ್ಟುಬೇಗ ಕಠಿಣ ದಿನಗಳು ದೂರವಾಗಲಿ ಎಂದು ಹರ್ದೊಯ್‌ ಶಾಸಕ ಆಶಿಶ್‌ ಸಿಂಗ್‌ ಹೇಳಿದ ಕೆಲವೇ ದಿನಗಳಲ್ಲಿ ಈ ವಿವಾದ ಬಿಜೆಪಿಗೆ ಮುಜುಗರ ತಂದಿದ್ದು, ಪ್ರಕರಣದಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಇದು ಅವರ ವೈಯಕ್ತಿಕ ಜಾಹಿರಾತು ಆಗಿದ್ದು, ಅದಕ್ಕೂ ಪಕ್ಕಕ್ಕೂ ಯಾವುದೇ ಸಂಬಂಧ ಇಲ್ಲ . ಸೆಂಗರ್‌ ಮೇಲೆ ಯಾವುದೇ ಕರುಣೆ ತೋರುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಹೇಳಿದೆ.

2017 ರಲ್ಲಿ ಬಾಲಕಿ ಮೇಲೆ ತಮ್ಮ ನಿವಾಸದಲ್ಲಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಸೆಂಗರ್‌, ಕಳೆದೊಂದು ವರ್ಷದಿಂದ ಜೈಲಿನಲ್ಲಿದ್ದಾರೆ. ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಯುತ್ತಿದೆ.