ವಾಷಿಂಗ್ಟನ್(ಜ.30): ಅಮೆರಿಕದ ಗುಪ್ತಚರ ಸಂಸ್ಥೆಗಳಿಗೆ ಭಾರತ ಅಂದ್ರೆ ಅದೇನು ದ್ವೇಷವೋ ಏನೋ ಗೊತ್ತಿಲ್ಲ. ಆಗಾಗ ಭಾರತದ ಸ್ಥಿತಿಗತಿಯ ಕುರಿತು ವರದಿ ಬಹಿರಂಗ ಮಾಡುತ್ತಾ, ಇದ್ದಿದ್ದು ಇಲ್ಲದ್ದನ್ನು ಹೇಳಿ ಗೊಂದಲ ಸೃಷ್ಟಿಸುತ್ತಿರುತ್ತವೆ.

ಅದರಂತೆ ಅಮೆರಿಕದ ನ್ಯಾಶನಲ್ ಇಂಟೆಲಿಜೆನ್ಸ್ ಅಧಿಕಾರಿ ಹೊಸ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಸದ್ಯ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಿಂದುತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೋಮುಗಲಭೆ ಉಂಟಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿದ್ದಾರೆ.

2019ರಲ್ಲಿ ಜಗತ್ತಿನಲ್ಲಿ ಉಂಟಾಗಬಹುದಾದ ಅಪಾಯ ಪರಿಸ್ಥಿತಿಗಳ ಪರಿಶೀಲನೆ ಕೈಗೊಂಡಿರುವ ಸಿಐಎ, ಭಾರತದಲ್ಲಿ ಕೋಮುಗಸಭೆ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ. ಈ ವರದಿಯನ್ನು ಅಧಿಕಾರಿ ಅಮೆರಿಕದ ಸೆನೆಟ್‌ಗೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಿಂದೂ ರಾಷ್ಟ್ರೀಯತೆಗೆ ಒತ್ತು ನೀಡಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕೋಮು ಗಲಭೆ ಉಂಟಾಗುವ ಸಾಧ್ಯತೆಯಿದೆ. ಹಿಂದುತ್ವದ ನಾಯಕರು ಹಿಂದೂ ರಾಷ್ಟ್ರೀಯತೆ ಪ್ರಚಾರದಲ್ಲಿ ತೊಡಗಿದರೆ, ಅವರ ಬೆಂಬಲಿಗರು ಗಲಭೆ ಸೃಷ್ಟಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಅಲ್ಲದೇ ಚುನಾವಣೆ ಸಮೀಪಿಸುತ್ತಿದ್ದಂತೇ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಕೂಡ ಹಳಸುವ ಸಾಧ್ಯತೆ ಇದೆ ಎಂದು ಕೂಡ ವರದಿ ಎಚ್ಚರಿಸಿದೆ.