ನವದೆಹಲಿ: ಇಡೀ ದೇಶದ ಶಾಂತಿಗೆ ಕಂಟಕಪ್ರಾಯರಾಗಿರುವ ಜಮ್ಮು ಮತ್ತು ಕಾಶ್ಮೀರದ ಉಗ್ರರು ಮತ್ತು ಉಗ್ರ ಸಂಘಟನೆಗಳನ್ನು ಹೆಡೆಮುರಿಕಟ್ಟಲು ನಿರ್ಧರಿಸಿರುವ ಕೇಂದ್ರದ ನೂತನ ಗೃಹ ಸಚಿವ ಅಮಿತ್‌ ಶಾ, ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಟಾಪ್‌ 10 ಉಗ್ರರ ಪಟ್ಟಿಯೊಂದನ್ನು ತರಿಸಿಕೊಂಡಿದ್ದಾರೆ.

ಕಳೆದ 5 ವರ್ಷದಲ್ಲಿ ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರ, ಉಗ್ರರ ವಿರುದ್ಧ ತೋರಿದ ಕಠಿಣ ಧೋರಣೆಗಳಿಂದಾಗಿ ನೂರಾರು ಸಂಖ್ಯೆಯಲ್ಲಿ ಉಗ್ರರನ್ನು ಹೊಡೆದುರುಳಿಸಲಾಗಿದೆ. ಹೀಗಾಗಿ ರಾಜ್ಯವ್ಯಾಪಿ ಹಬ್ಬಿದ್ದ ಉಗ್ರವಾದ ಕೇವಲ ಈಗ ರಾಜ್ಯದ 4 ಜಿಲ್ಲೆಗಳಿಗೆ ಸೀಮಿತವಾಗಿದೆ. ಅಲ್ಲಿಂದಲೂ ಉಗ್ರರನ್ನು ಪೂರ್ಣ ಪ್ರಮಾಣದಲ್ಲಿ ನಾಶಗೊಳಿಸಲು ಇದೀಗ ಅಮಿತ್‌ ಶಾ ಯೋಜನೆಯೊಂದನ್ನು ರೂಪಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ, ಸೇನೆ ಹಾಗೂ ಕಾಶ್ಮೀರಿ ಪೊಲೀಸರ ಮೂಲಕ ಟಾಪ್‌ 10 ಉಗ್ರರ ಪಟ್ಟಿಯನ್ನು ಅಮಿತ್‌ ಶಾ ತರಿಸಿಕೊಂಡಿದ್ದು, ಅವರನ್ನು ಜೀವಸಹಿತ ಹಿಡಿದು ತನ್ನಿ ಇಲ್ಲವೇ ಬೇರೆ ದಾರಿಯಲ್ಲಿದರೂ ಸೈ ಅವರನ್ನು ಮಟ್ಟಹಾಕಿ ಎಂದು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಶೀಘ್ರವೇ ಈ 10 ಉಗ್ರರ ವಿರುದ್ಧ ಭಾರೀ ಪ್ರಮಾಣದಲ್ಲಿ ಸಂಘಟಿತ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಹೀಗೆ ಶಾ ಕೈಸೇರಿರುವ ಉಗ್ರರ ಪಟ್ಟಿಯಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥ ರಿಯಾಜ್‌ ನೈಕೋ, ಲಷ್ಕರ್‌ ಎ ತೊಯ್ಬಾ ಜಿಲ್ಲಾ ಕಮಾಂಡರ್‌ ವಾಸಿಂ ಅಹಮ್ಮದ್‌ ಅಲಿಯಾಸ್‌ ಒಸಾಮಾ ಮತ್ತು ಅಶ್ರಫ್‌ ಮೌಲ್ವಿ ಸೇರಿದ್ದಾರೆ ಎನ್ನಲಾಗಿದೆ.