ನವದೆಹಲಿ(ಅ.07): ಜಮ್ಮು ಮತ್ತು ಕಾಶ್ಮೀರದ ಕುರಿತು ಅತ್ಯಂತ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅನುಕೂಲಕರ ಪರಿಸ್ಥಿತಿ ನಿರ್ಮಾಣವಾದಾಗ ಕಣಿವೆಗೆ ಮತ್ತೆ ರಾಜ್ಯ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ..

ಜಮ್ಮು ಮತ್ತು ಕಾಶ್ಮೀರ ಶಾಶ್ವತವಾಗಿ ಕೇಂದ್ರಾಡಳಿತ ಪ್ರದೇಶವಾಗಿರುವುದಿಲ್ಲ ಎಂದಿರುವ ಶಾ, ಕಣಿವೆಯಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದ ಮೇಲೆ ರಾಜ್ಯತ್ವವನ್ನು ಮರಳಿ ಕೊಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

370ನೇ ವಿಧಿ ಕಾಶ್ಮೀರಿ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಿದೆ ಎಂಬ ಕಲ್ಪನೆ ತಪ್ಪು ಎಂದಿರುವ ಗೃಹ ಸಚಿವರು, ಎಲ್ಲಾ ಪ್ರಾದೇಶಿಕ ವೈಶಿಷ್ಟ್ಯತೆಗಳು  ಭಾರತೀಯ ಸಂವಿಧಾನದಿಂದ ಅಂತರ್ಗತವಾಗಿ ರಕ್ಷಿಸಲ್ಪಟ್ಟಿವೆ ಎಂದು ಪ್ರತಿಪಾದಿಸಿದ್ದಾರೆ.

370ನೇ ವಿಧಿಯಿಂದಾಗಿ ಗಡಿಯಾಚೆಗಿನ ಭಯೋತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿದ್ದು, ಅದಕ್ಕೆ ಕಡಿವಾಣ ಹಾಕಲು ಇದೀಗ ಸಾಧ್ಯವಾಗಿದೆ ಎಂದು ಶಾ ನುಡಿದಿದ್ದಾರೆ. ಇದೇ ವೇಳೆ ಎನ್‌ಆರ್‌ಸಿ ದೇಶವನ್ನು ಮತ್ತಷ್ಟು ಸಬಲೀಕರಣದ ದಾರಿಯಲ್ಲಿ ಕೊಂಡೊಯ್ಯುತ್ತಿದ್ದು, ಆಡಳಿತಾತ್ಮಕವಾಗಿಯೂ ಅತ್ಯಂತ ಸಹಾಯಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.