ಚಿಕ್ಕೋಡಿ:(ಸೆ.21) ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಂವಿಧಾನದ 370ನೇ ವಿಧಿ ರದ್ದತಿಯಿಂದ ಭಾರತ ಬದಲಾಗುತ್ತಿದೆ. ಎಲ್ಲರಲ್ಲಿಯೂ ಇಚ್ಛಾಶಕ್ತಿ ಹೆಚ್ಚಿಸುತ್ತಿದೆ. ಹೀಗಾಗಿ ಭಾರತವನ್ನು ಇಡೀ ಪ್ರಪಂಚವೇ ಎದುರು ನೋಡುವ ಹಾಗೇ ಅಭಿವೃದ್ಧಿ ಕಾಣುತ್ತಿದ್ದು, ಪ್ರತಿಯೊಬ್ಬರೂ ದೇಶಾಭಿಮಾನ ಮೂಡಿಸಿಕೊಂಡು ಭವ್ಯ ಭಾರತ ಕಟ್ಟಲು ಕೈಜೋಡಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಶುಕ್ರವಾರ ನಗರದ ಕೆಎಲ್‌ಇ ಸಂಸ್ಥೆಯ ಎಂಜಿನಿಯರಿಂಗ್‌ ಕಾಲೇಜಿನ ಸಭಾ ಭವನದಲ್ಲಿ ನಡೆದ ರಾಷ್ಟ್ರೀಯ ಏಕತಾ ಭಿಯಾನದ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ದೇಶದ ಒಂದು ಅಂಗ, ಆದರೆ ಇಡೀ ದೇಶಕ್ಕೆ ಅನ್ವಯವಾಗದ ಕಾನೂನುಗಳು ವಿಧಿ 370ರನ್ವಯ ಜಮ್ಮುದಲ್ಲಿ ಅನ್ವಯವಾಗುತ್ತಿತ್ತು. ಹೀಗಾಗಿ ಕಾಶ್ಮೀರದಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ದಲಿತ ಮತ್ತು ಮಹಿಳಾ ವಿರೋಧಿ ಚಟುವಟಿಕೆಗಳು ಕಳೆದ 70 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದವು.

ಉತ್ತರ ಕರ್ನಾಟಕಕ್ಕೆ ಬಿಎಸ್‌ವೈ ಉತ್ತಮ ನೆರವು: ತೇಜಸ್ವಿ


ಒಂದು ದೇಶ ಸಮಗ್ರವಾಗಿ ಅಭಿವೃದ್ಧಿ ಕಾಣಬೇಕಾದರೆ ದೇಶದ ಎಲ್ಲ ರಾಜ್ಯಗಳು ಸರಿಸಮಾನವಾಗಿ ಇರಬೇಕು ಎಂದು ಆಲೋಚಿಸಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ ಶಾ ಅವರು ದಿಟ್ಟ ನಿರ್ಧಾರದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಅಂಟಿಕೊಂಡಿರುವ 370ನೇ ವಿಧಿಯನ್ನು ರದ್ದು ಮಾಡಿ ಅಲ್ಲಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು. 

ನೆಹರೂ ಮಾಡಿದ ತಪ್ಪಿಗೆ 41 ಸಾವಿರ ಬಲಿ

ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಮಾಡಿದ ಒಂದು ತಪ್ಪಿನಿಂದ ಸುಮಾರು 41 ಸಾವಿರ ಜನ ಇಲ್ಲಿಯವರಿಗೆ ಮೃತಪಟ್ಟಿದ್ದಾರೆ. ಅಲ್ಲಿನ ಎರಡು ಮನೆತನದ ಹಿತಾಶಕ್ತಿಗೆ ಇಡೀ ದೇಶದ ಮೇಲೆ ಕೆಟ್ಟ ಹೆಸರು ಬರುವಂತಾಗಿದೆ. ಕಳೆದ 70 ವರ್ಷದ ಅವಧಿಯಲ್ಲಿ ದೇಶದ ಯಾವುದೇ ಒಂದು ಮೀಸಲಾತಿ ಅನ್ವಯವಾಗಿಲ್ಲ, ದೇಶದ 106 ಕಾನೂನುಗಳು ಜಾರಿ ಆಗುತ್ತಿರಲಿಲ್ಲ, ಹೀಗಾಗಿ ಅಲ್ಲಿಯ ಜನರು ಪ್ರೀತಿ, ವಿಶ್ವಾಸದಿಂದ ವಂಚಿತಗೊಂಡು ಭಯದ ವಾತಾವರಣದಲ್ಲಿ ಜೀವನ ನಡೆಸಿದ್ದು, ಕೇಂದ್ರದ ದಿಟ್ಟನಿರ್ಧಾರದಿಂದ ಜಮ್ಮು ಕಾಶ್ಮೀರದಲ್ಲಿ ಈಗ ಸಂಪೂರ್ಣ ಶಾಂತಿ ನೆಲೆಸುವಂತಾಗಿದೆ ಎಂದು ಹೇಳಿದರು.

ಸಂವಿಧಾನದ 370ನೇ ವಿಧಿ ಬಳಸಿಕೊಂಡು ಅದೇ ವಿಧಿಯನ್ನು ರದ್ದುಗೊಳಿಸಿದ ಕೀರ್ತಿ ಚಾಣಾಕ್ಷ ರಾಜಕಾರಣಿ ಮೋದಿ ಮತ್ತು ಅಮಿತ ಶಾಗೆ ಸಲ್ಲುತ್ತದೆ. ವಿಧಿಯನ್ನು ರದ್ದು ಮಾಡುವ ನಿರ್ಧಾರದ ವಿಷಯ ಗುಟ್ಟಾಗಿ ಇಟ್ಟುಕೊಂಡು ಸಂಸತ್ತಿನಲ್ಲಿ ಮಂಡಿಸಿದಾಗ ಎಲ್ಲರಿಗೂ ವಿಷಯ ಗೊತ್ತಾಗಿದೆ. ದೇಶದ ಹಿತಕ್ಕಾಗಿ ಕೇಂದ್ರ ಸರ್ಕಾರ ಸದಾ ಮುಂಚೂಣಿಯಲ್ಲಿದ್ದುಕೊಂಡು ಕೆಲಸ ಮಾಡುತ್ತಿದೆ ಎಂದರು.

ಬಳಿಕ ಮಾತನಾಡಿದ ಮಾಜಿ ಶಾಸಕ ಸಂಜಯ ಪಾಟೀಲ, ದೇಶಕ್ಕೆ ಧಕ್ಕೆಯಾಗುವ 370ನೇ ಕಲಂನ್ನು ಪ್ರಧಾನಿ ಮೋದಿ ರದ್ದು ಮಾಡಿರುವುದು ದೇಶದ ಜನರಿಗೆ ತೃಪ್ತಿ ತಂದಿದ್ದು, ಅನವಶ್ಯಕವಾಗಿ ಪಾಕಿಸ್ತಾನ ಭಾರತ ತಂಟೆಗೆ ಬಂದರೇ ತಕ್ಕ ಶಾಸ್ತಿ ಮಾಡುವ ಬಲ ಭಾರತ ಹೊಂದಿದೆ. ಇಲ್ಲಿಯವರಿಗೆ ಜಮ್ಮುಕಾಶ್ಮೀರ ಕೇವಲ ಪುಸ್ತಕ ಮತ್ತು ಪೇಪರ್‌ದಲ್ಲಿ ನೋಡುತ್ತಿದ್ದೆವು ಈಗ ಭಾರತದಲ್ಲಿ ನೋಡುತ್ತಿದ್ದೇವೆ ಎಂದರು.

ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಶಶಿಕಾಂತ ನಾಯಿಕ, ಧನ್ಯಕುಮಾರ ಗುಂಡೆ, ಸಂಜಯ ಅಡಕೆ, ರಾಜು ಚಿಕ್ಕನಗೌಡರ, ಬಸವಪ್ರಸಾದ ಜೊಲ್ಲೆ, ಚಿದಾನಂದ ಸವದಿ, ಸಂಜು ಅರಗೆ, ಅಪ್ಪಾಸಾಹೇಬ ಚೌಗಲೆ, ದುಂಡಪ್ಪ ಬೆಂಡವಾಡೆ, ಸಂಜು ಕವಟಗಿಮಠ, ಡಾ.ದಯಾನಂದ ನೂಲಿ, ಬಾಬು ಮಿರ್ಜೆ, ಸೋಮು ಗವನಾಳೆ, ರಾಜು ಖೋತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.