ಗುವಹಾಟಿ(ಸೆ.08): ಅಸ್ಸಾಂನಲ್ಲಿ NRC ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿದ್ದು, ಅಕ್ರಮ ವಲಸಿಗರನ್ನು ಗುರುತಿಸಿ ಹೊರ ದಬ್ಬಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಅಸ್ಸಾಂ ಪ್ರವಾಸ ಕೈಗೊಂಡಿರುವ ಅಮಿತ್ ಶಾ, ಒಬ್ಬೇ ಒಬ್ಬ ಅಕ್ರಮ ವಲಸಿಗನನ್ನೂ ರಾಜ್ಯದಲ್ಲಿ ನೆಲೆಸಲು ನಾವು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.


ಅಸ್ಸಾಂ ರಾಜಧಾನಿ ಗುವಹಾಟಿಯಲ್ಲಿ ನಡೆದ ಈಶಾನ್ಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, NRC ಪ್ರಕ್ರಿಯೆ ಸಂಪೂರ್ಣ ಮುಗಿದ ಬಳಿಕ ಅಕ್ರಮ ವಲಸಿಗರನ್ನು ಹೊರ ದಬ್ಬುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ನುಡಿದರು.

ಇತ್ತೀಚಿಗೆ ಮುಕ್ತಾಯ ಕಂಡ  NRC ಪ್ರಕ್ರಿಯೆಯಲ್ಲಿ ಸುಮಾರು 19 ಲಕ್ಷ ನಾಗರಿಕರನ್ನು NRC ಪಟ್ಟಿಯಿಂದ ಹೊರ ಹಾಕಲಾಗಿದ್ದು, ಇವರೆಲ್ಲರನ್ನೂ ದೇಶದಿಂದ ಹೊರ ಹಾಕುವ ಭೀತಿ ಎದುರಾಗಿದೆ.