ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯಲ್ಲಿರುವ ಬಿಜೆಪಿ ಬೆಂಗಳೂರಿನಲ್ಲಿ ಇಂದು ಪರಿವರ್ತನಾ ಸಮಾವೇಶ ಆಯೋಜಿಸಿತ್ತು. ಪರಿವರ್ತನಾ ರ್ಯಾಲಿಯ ಉದ್ಘಾಟನಾ ಸಮಾವೇಶದ ವೈಫಲ್ಯ ಡ್ಯಾಮೇಜ್​ ಕಂಟ್ರೋಲ್​ನಲ್ಲಿ ಬಿಜೆಪಿ ಎರಡನೇ ಸಮಾವೇಶದಲ್ಲೂ ಯಶಸ್ವಿಯಾಗಿದೆ. ಈ ಮಧ್ಯೆ ಕೇಂದ್ರ ಗೃಹಸಚಿವ ರಾಜನಾಥ್​ ಸಿಂಗ್​ ರಾಜ್ಯದಲ್ಲಿ ನಡೆದ ಹತ್ಯೆ ಪ್ರಕರಣ, ಟಿಪ್ಪು ಜಯಂತಿ, ಸ್ಟೀಲ್​ ಬ್ರಿಡ್ಜ್​ ಹಗರಣಗಳನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರು (ಡಿ.17): ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯಲ್ಲಿರುವ ಬಿಜೆಪಿ ಬೆಂಗಳೂರಿನಲ್ಲಿ ಇಂದು ಪರಿವರ್ತನಾ ಸಮಾವೇಶ ಆಯೋಜಿಸಿತ್ತು. ಪರಿವರ್ತನಾ ರ್ಯಾಲಿಯ ಉದ್ಘಾಟನಾ ಸಮಾವೇಶದ ವೈಫಲ್ಯ ಡ್ಯಾಮೇಜ್​ ಕಂಟ್ರೋಲ್​ನಲ್ಲಿ ಬಿಜೆಪಿ ಎರಡನೇ ಸಮಾವೇಶದಲ್ಲೂ ಯಶಸ್ವಿಯಾಗಿದೆ. ಈ ಮಧ್ಯೆ ಕೇಂದ್ರ ಗೃಹಸಚಿವ ರಾಜನಾಥ್​ ಸಿಂಗ್​ ರಾಜ್ಯದಲ್ಲಿ ನಡೆದ ಹತ್ಯೆ ಪ್ರಕರಣ, ಟಿಪ್ಪು ಜಯಂತಿ, ಸ್ಟೀಲ್​ ಬ್ರಿಡ್ಜ್​ ಹಗರಣಗಳನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಪರಿವರ್ತನಾ ಸಮಾವೇಶದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ರಾಜ್ಯ ಸರ್ಕಾರದ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ. ಹೆಚ್​ಎಎಲ್​ ವಿಮಾನ ನಿಲ್ದಾಣದ ಸಮೀಪ ಆಯೋಜಿಸಿದ್ದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್​ ಸಿಂಗ್​, ಕಾನೂನು ಮತ್ತು ಸುವ್ಯವಸ್ಥೆಯ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ತೀವ್ರ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಟಿಪ್ಪು ಜಯಂತಿ ಆಚರಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಬದಲು ಕಿತ್ತೂರು ಚನ್ನಮ್ಮ, ಕೆಂಪೇಗೌಡ, ವಿಶ್ವೇಶ್ವರಯ್ಯ ಜಯಂತಿ ಆಚರಿಸಬಹುದಿತ್ತಲ್ಲವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಗೌರಿ ಲಂಕೇಶ್​, ರುದ್ರೇಶ್​, ಪರೇಶ್​ ಮೇಸ್ತ ಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸಿದ ಕೇಂದ್ರ ಗೃಹ ಸಚಿವರು ತನಿಖೆಯಲ್ಲಿ ಇನ್ನೂ ಪ್ರಗತಿ ಸಾಧಿಸಿಲ್ಲ ಯಾಕೆ ಎಂದೂ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇದಲ್ಲದೇ ತೀವ್ರ ವಿವಾದಕ್ಕೀಡಾಗಿದ್ದ ಸ್ಟೀಲ್​ ಬ್ರಿಡ್ಜ್ ವಿಚಾರವನ್ನೂ ತಮ್ಮ ಭಾಷಣದ ಮಧ್ಯೆ ರಾಜನಾಥ್​ ಸಿಂಗ್​ ಪ್ರಸ್ತಾಪಿಸಿದರು.

ಇದೇ ವೇಳೆ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಕೆ.ಆರ್​. ಪುರಂ ಶಾಸಕರು ಬೆಂಗಳೂರಿನ ಲ್ಯಾಂಡ್​ ಮಾಫಿಯಾದ ಕಿಂಗ್​ ಪಿನ್​ ಆಗಿದ್ದು, ಶಾಸಕರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 81 ಕೊಲೆಗಳು ಆಗಿವೆ ಎಂದು ಭೈರತಿ ಬಸವರಾಜ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಬೆಂಗಳೂರಿನ ಸದ್ಯದ ಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ವಾಸ ಮಾಡಲು ಭಯವಾಗುತ್ತಿದೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.