ನವದೆಹಲಿ(ಜೂ.28): ಮುಂದಿನ ಆರು ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣ ಶಾಂತಿ ನೆಲೆಸಲಿದ್ದು, ಅಲ್ಲಿಯವರೆಗೂ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಮುಂದುವರಿಸುವ ಇರಾದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಇಂದು ಮಾತನಾಡಿದ ಅಮಿತ್ ಶಾ, ಜುಲೈ 3ರಿಂದ ಮತ್ತೆ ಆರು ತಿಂಗಳವರೆಗೆ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸುವಂತೆ ಶಾಸನಬದ್ಧ ನಿರ್ಣಯ ಮಂಡಿಸಿದರು.

ಕಣಿವೆ ಶಾಂತವಾಗಲು ಏನಿಲ್ಲವೆಂದರೂ 6 ತಿಂಗಳ ಸಮಯ ಬೇಕು. ಈ ಹಿನ್ನೆಲೆಯಲ್ಲಿ ಸದ್ಯ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಲೋಕಸಭೆಗೆ ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗ ಈ ವರ್ಷದ ಕೊನೆಯಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸಲು ತೀರ್ಮಾನಿಸಿದ್ದು, ಅಷ್ಟರಲ್ಲಿ ಶಾಂತಿಯುತ ಅಮರನಾಥ್ ಯಾತ್ರೆಗೆ ಸರ್ಕಾರ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಿದೆ ಎಂದು ಅಮಿತ್ ಶಾ ತಿಳಿಸಿದರು.