ನವದೆಹಲಿ: ದೇಶದ 16.3 ಕೋಟಿ ಪಡಿತರದಾರರಿಗೆ ತಲಾ 1 ಕೆ.ಜಿ. ಸಕ್ಕರೆ ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದೇ ವೇಳೆ, ಹೆಚ್ಚುವರಿಯಾಗಿ 2 ಕೆ.ಜಿ. ಅಕ್ಕಿ ಹಾಗೂ ಗೋಧಿಯನ್ನು ನೀಡುವ ಕುರಿತೂ ಚಿಂತನೆಯಲ್ಲಿ ಮಗ್ನವಾಗಿದೆ.

ಸದ್ಯ 2.5 ಕೋಟಿ ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳಿಗೆ ಕೆ.ಜಿ.ಗೆ 13.5 ರು.ನಂತೆ ಸಬ್ಸಿಡಿ ದರದಲ್ಲಿ ಕೇಂದ್ರ ಸರ್ಕಾರ ಸಕ್ಕರೆ ವಿತರಿಸುತ್ತಿದೆ. ಇದನ್ನು 16.3 ಕೋಟಿ ಕುಟುಂಬಗಳಿಗೆ ವಿಸ್ತರಣೆ ಮಾಡಲು ಉದ್ದೇಶಿಸಿದೆ. ಇದರಿಂದ ಸರ್ಕಾರದ ಬೊಕ್ಕಸದ ಮೇಲೆ 4727 ಕೋಟಿ ರು. ಹೊರೆ ಬೀಳಲಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ನಡೆಸಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಆಹಾರ ಸಚಿವಾಲಯ ಈ ಕುರಿತು ಮಂಡಿಸಿದ್ದ ಪ್ರಸ್ತಾಪದ ಬಗ್ಗೆ ಚರ್ಚೆಯಾಗಿದೆ. ಆದರೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಪಡಿತರದಾರರಿಗೆ 5 ಕೆ.ಜಿ. ಆಹಾರ ಧಾನ್ಯವನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪೂರೈಸಲಾಗುತ್ತಿದೆ. ಅಕ್ಕಿಯನ್ನು ಕೆ.ಜಿ.ಗೆ 3 ರು.ನಂತೆ ಹಾಗೂ ಗೋಧಿಯನ್ನು ಕೆ.ಜಿ.ಗೆ 2 ರುನಂತೆ ಒದಗಿಸಲಾಗುತ್ತಿದೆ. ಈ ಆಹಾರ ಧಾನ್ಯಗಳ ಪ್ರಮಾಣವನ್ನು 2 ಕೆ.ಜಿ.ಯಷ್ಟುಹೆಚ್ಚಳ ಮಾಡುವ ಚಿಂತನೆ ಇದೆ ಎಂದು ಮೂಲಗಳು ತಿಳಿಸಿವೆ.

ಆಹಾರ ನಿಗಮದ ಗೋದಾಮುಗಳಲ್ಲಿ ಸಾಕಷ್ಟುಪ್ರಮಾಣದಲ್ಲಿ ದಾಸ್ತಾನು ಇದೆ. ಮುಂಗಾರು ಆರಂಭವಾಗುವುದರೊಳಗಾಗಿ ಅದನ್ನು ಖಾಲಿ ಮಾಡಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.