ಕಾವೇರಿ ನದಿ ನೀರು ಹಂಚಿಕೆಯಲ್ಲಿ  ಕರುನಾಡಿಗೆ ಮತ್ತೆ ಸಂಕಷ್ಟ ಕಾದಿದೆಯಾ? ಹೀಗೊಂದು ಪ್ರಶ್ನೆ ಮತ್ತೆ ಉದ್ಭವವಾಗಿದೆ. ಶುಕ್ರವಾರದ ಬೆಳವಣಿಗೆಳು ಇದಕ್ಕೆ ಹೌದು ಎನ್ನುತ್ತಿವೆ.

ನವದೆಹಲಿ [ಜೂ 22] ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರುನಾಡಿಗೆ ಮತ್ತೆ ಸಂಕಟ ಕಾದಿದೆಯಾ? ಹೀಗೊಂದು ಪ್ರಶ್ನೆ ಮತ್ತೆ ಉದ್ಭವವಾಗಿದೆ. ಶುಕ್ರವಾರದ ಬೆಳವಣಿಗೆಳು ಇದಕ್ಕೆ ಹೌದು ಎನ್ನುತ್ತಿವೆ.

ಕಾವೇರಿ ನಿಯಂತ್ರಣಾ ಸಮಿತಿ ರಚಿಸಿ ಕೇಂದ್ರ ಸರಕಾರ ಆದೇಶ ನೀಡಿದೆ. ಕಾವೇರಿ ನೀರು ನಿರ್ವಹಣೆ ಸ್ಕೀಮ್ ಆಧಾರದಲ್ಲಿ ಕೇಂದ್ರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದು ಬೆಂಗಳೂರಿಲ್ಲಿ "ಕಾವೇರಿ ನೀರು ನಿಯಂತ್ರಣಾ ಸಮಿತಿ" ಕೇಂದ್ರ ಕಚೇರಿ ಇರಲಿದೆ. 

ಆದರೆ ನಿಯಂತ್ರಣಾ ಸಮಿತಿಗೆ ರಾಜ್ಯ ಸರ್ಕಾರದಿಂದ ಪ್ರತಿನಿಧಿ ನೇಮಕ ಆಗಿಲ್ಲ. ನಿಯಂತ್ರಣಾ ಸಮಿತಿಗೆ ಚೇರ್ಮನ್ ಆಗಿ ಕೇಂದ್ರ ಜಲ ಆಯೋಗದ ಚೀಫ್ ಇಂಜಿನಿಯರ್ ನವೀನ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ನಿಯಂತ್ರಣಾ ಸಮಿತಿಯಲ್ಲಿ ಒಟ್ಟು 7 ಸದಸ್ಯರಿರಲಿದ್ದಾರೆ. ಕರ್ನಾಟಕ ಜಲ ಸಂಪನ್ಮೂಲ ಇಲಾಖೆ ಚೀಫ್ ಇಂಜಿನಿಯರ್ ಸದಸ್ಯ ಎಂದು ಪರಿಗಣಿಸಲಾಗುತ್ತದೆ. 

ಇವರ ಜತೆಗೆ ಕೇರಳ, ಪುದುಚೇರಿ, ತಮಿಳು ನಾಡು ಜಲಸಂಪನ್ಮೂಲ ಇಲಾಖೆ ಚೀಫ್ ಇಂಜಿನಿಯರ್, ಭಾರತೀಯ ಹವಾಮಾನಇಲಾಖೆ ವಿಜ್ಞಾನಿ ಡಾ.ಎಂ.ಮೋಹಪಾತ್ರ ಮತ್ತು ಕೋಯಮತ್ತೂರಿನಲ್ಲಿರುವ ಕೇಂದ್ರ ಚೀಫ್ ಇಂಜಿನಿಯರ್ ಗೂ ಸದಸ್ಯತ್ವ ನೀಡಲಾಗಿದೆ. 

ನೀರು ನಿಯಂತ್ರಣಾ ಸಮಿತಿಯನ್ನು ಕೇಂದ್ರದ ಪರವಾಗಿ ಎನ್ ಎಂ.ಕೃಷ್ಣನುನ್ನಿ ಪ್ರತಿನಿಧಿಸಲಿದ್ದು ಕೇಂದ್ರ ಸರ್ಕಾರದ ತೋಟಗಾರಿಕೆ ವಿಭಾಗದಿಂದ ಆಯುಕ್ತರಿಗೂ ಸದಸ್ಯತ್ವ ನೀಡಲಾಗಿದೆ. ನಿಯಂತ್ರಣಾ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿ ಕೇಂದ್ರ ಜಲ ಆಯೋಗದ ಚೀಫ್ ಇಂಜಿನಿಯರ್ ಎ.ಎಸ್.ಗೋಯಲ್ ಅಧಿಕಾರ ನಿರ್ವಹಿಸಲಿದ್ದು ಇಲ್ಲಿಯವರೆಗೆ ರಾಜ್ಯ ಸರಕಾರಕ್ಕೆ ಅಧಿಕೃತ ಮಾಹಿತಿ ತಿಳಿಸಲಾಗಿಲ್ಲ.

ನಿರ್ವಹಣಾ ಪ್ರಾಧಿಕಾರಕ್ಕೂ ಅಸ್ತು? ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಚೇರಿ ನವದೆಹಲಿಯಲ್ಲಿ ಇರಲಿದೆ. ಪ್ರಾಧಿಕಾರದ ಕಾರ್ಯನಿರ್ವಹಣೆಯ ವೆಚ್ಚವನ್ನು ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ 40:40:15:5 ಅನುಪಾತದಲ್ಲಿ ಹಂಚಿಕೊಳ್ಳಬೇಕಿದೆ.

ಪ್ರಾಧಿಕಾರಕ್ಕೆ ಯಾವ ಕೆಲಸ ವಹಿಸಲಾಗುತ್ತದೆ?
1) ಜಲ ಸಂಗ್ರಹ, ಜಲ ಹಂಚಿಕೆ, ನಿಯಂತ್ರಣ ಮತ್ತು ಕಾವೇರಿ ನದಿ ನೀರಿನ ನಿಯಂತ್ರಣ
2) ಜಲಾಶಯಗಳ ಮೇಲುಸ್ತುವಾರಿ, ಮತ್ತು ನಿಯಂತ್ರಣ ಸಮಿತಿಯ ನೆರವಿನಿಂದ ನದಿ ನೀರಿನ ಬಿಡುಗಡೆ
3) ಕರ್ನಾಟಕ ಮತ್ತು ತಮಿಳುನಾಡಿನ ಅಂತರ್ ರಾಜ್ಯ ಗಡಿ ಮತ್ತು ಜಲ ಮಾಪನ ಕೇಂದ್ರವಾಗಿರುವ ಬಿಳಿಗುಂಡ್ಲುವಿಗೆ ಕರ್ನಾಟಕದಿಂದ ಹರಿವ ನೀರನ್ನು ನಿಯಂತ್ರಿಸುವುದು.
4) ವಾಡಿಕೆಗಿಂತ ಕಡಿಮೆ ಮಳೆಯಾದ ಸಂದರ್ಭದಲ್ಲಿ ಸಂಕಷ್ಟ ಸೂತ್ರವನ್ನು ಹೆಣೆಯುವುದು.
5) ಜಲ ವರ್ಷದ ಆರಂಭದಲ್ಲಿ ಅಂದರೆ ಜೂನ್ 1 ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಅಳೆಯುವುದು. ನೀರಿನ ಒಳ ಹರಿವು, ಸಂಗ್ರಹ, ಬಳಕೆ ಮತ್ತು ಬಿಡುಗಡೆ ಕುರಿತಂತೆ ಪ್ರತಿ 10 ದಿನಕ್ಕೊಮ್ಮೆ ನಿರ್ಧಾರ ಕೈಗೊಳ್ಳುವುದು.
6) ಕಾವೇರಿ ಕೊಳ್ಳದ ಜಲಾಶಯಗಳು ಆಯಾ ರಾಜ್ಯಗಳಿಗೆ ಸೇರಿದ್ದರೂ ಅದರ ಮೇಲ್ವಿಚರಣೆ ನಡೆಸುವುದು.ನೀರಾವರಿ, ಜಲ ವಿದ್ಯುತ್ ಉತ್ಪಾದನೆ, ಸ್ಥಳೀಯ ಮತ್ತು ಕೈಗಾರಿಕಾ ಬಳಕೆಗೆ ಸಂಬಂಧಿಸಿದಂತೆ ನೀರಿನ ಬಳಕೆ ಬಗ್ಗೆ ರಾಜ್ಯಗಳಿಗೆ ಸಲಹೆ-ಸೂಚನೆಗಳನ್ನು ನೀಡುವುದು.
7) ಬೆಳೆ ಪದ್ಧತಿ, ಕೃಷಿ ಪ್ರದೇಶಗಳು ಮತ್ತು ನೀರಾವರಿಗೆ ಒಳಪಟ್ಟ ಪ್ರದೇಶಗಳ ಲೆಕ್ಕ ಇಟ್ಟುಕೊಳ್ಳುವುದು. ಗೃಹ ಮತ್ತು ಕೈಗಾರಿಕಾ ಜಲ ಬಳಕೆಯ ಮಾಹಿತಿ ಸಂಗ್ರಹ.
ಸಂಕಷ್ಟ ಮತ್ತು ಇನ್ನಿತರ ಜಲ ಸಂಬಂಧಿ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಕಾವೇರಿ ಕೊಳ್ಳದಲ್ಲಿ ಅತ್ಯಾಧುನಿಕ ಸಂಪರ್ಕ ಜಾಲ ರಚಿಸುವುದು
9) ಜೂನ್ ಮೊದಲ ದಿನ ಕಾವೇರಿ ಕೊಳ್ಳದ ಎಲ್ಲ ರಾಜ್ಯಗಳಿಂದ ತಮ್ಮ ಪ್ರತಿ ಜಲಾಶಯ ಪ್ರದೇಶದಲ್ಲಿ ತಮಗೆ ಎಷ್ಟು ನೀರು ಬೇಕು ಎಂಬ ಮಾಹಿತಿ ಪಡೆದು ಆ ಬಳಿಕ ನಿಯಂತ್ರಣ ಸಮಿತಿ, ಕೇಂದ್ರ ಜಲ ಮಂಡಳಿ, ಮತ್ತಿತ್ತರ ಸಂಸ್ಥೆಗಳ ನೆರವಿನಿಂದ ಸುಪ್ರೀಂ ಕೋರ್ಟ್ ತೀರ್ಪಿಗೆ ಒಳಪಟ್ಟು ನೀರು ಹಂಚುವುದು. ಒಂದು ವೇಳೆ ನೀರಿನ ಕೊರತೆ ಇದ್ದರೆ ಇದ್ದ ನೀರನ್ನು ಅನುಪಾತದ ಆಧಾರದಲ್ಲಿ ರಾಜ್ಯಗಳಿಗೆ ಹಂಚುವುದು.
10) ಪ್ರಮುಖ ಅಣೆಕಟ್ಟು ಪ್ರದೇಶಗಳಲ್ಲಿ ಸೂಕ್ತ ಹೈಡ್ರಾಲಿಕ್ ಘಟಕಗಳನ್ನು ರಚಿಸುವುದು. ಜಲ ಮಾಪನ ಕೇಂದ್ರಗಳಿಂದ ನೀರಿನ ಹರಿವಿನ ಮಾಹಿತಿ ಪಡೆಯುವುದು.
11) ಕಾವೇರಿ ಕೊಳ್ಳದಲ್ಲಿನ ಯಾವುದೇ ಹೈಡ್ರಾಲಿಕ್ ಘಟಕ, ಜಲ ಮಾಪನ ಕೇಂದ್ರಗಳಿಗೆ ಪ್ರಾಧಿಕಾರದ ಸದಸ್ಯ, ಪ್ರತಿನಿಧಿಗೆ ಪ್ರವೇಶ ಅವಕಾಶ.
12) ಪ್ರಾಧಿಕಾರವು ತನಗೆ ನೆರವು ನೀಡಲು ಒಂದು ಅಥವಾ ಹೆಚ್ಚು ಉಪ ಸಮಿತಿಗಳನ್ನು ರಚಿಸಿಕೊಳ್ಳುವ ಅಧಿಕಾರವನ್ನು ಹೊಂದಿದೆ.

ಈ ಪ್ರಾಧಿಕಾರದ ಕೆಳಗೆ ಕಾವೇರಿ ನೀರು ನಿಯಂತ್ರಣ ಸಮಿತಿ ಇರಲಿದೆ. ಕಾವೇರಿ ಪ್ರಾಧಿಕಾರದ ಖಾಯಂ ಸದಸ್ಯರೊಬ್ಬರು ಇದರ ಮುಖ್ಯಸ್ಥರಾಗಿರುತ್ತಾರೆ. ಪ್ರಾಧಿಕಾರದ ಕಾರ್ಯದರ್ಶಿ ನಾಲ್ಕೂ ರಾಜ್ಯಗಳ ಚೀಫ್ ಎಂಜಿನಿಯರ್ ಶ್ರೇಣಿಯ ಅಧಿಕಾರಿಗಳು, ಭಾರತೀಯ ಹವಾಮಾನ ಇಲಾಖೆ. ಕೇಂದ್ರ ಜಲ ಆಯೋಗ, ಕೃಷಿ ಇಲಾಖೆ ಮತ್ತು ರೈತ ಕಲ್ಯಾಣ ಇಲಾಖೆಗಳ ತಲಾ ಒಬ್ಬ ಅಧಿಕಾರಿ ಸಮಿತಿಯಲ್ಲಿ ಇರಲಿದ್ದಾರೆ. ಪ್ರತಿ ದಿನದ ನೀರಿನ ಒಳ ಹರಿವು, ನೀರಿನ ಲಭ್ಯತೆ ಹಾಗೂ ಎಲ್ಲಾ ಜಲಾಶಯಗಳ ಸಮಗ್ರ ಮಾಹಿತಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವುದು ನಿಯಂತ್ರಣ ಸಮಿತಿಯ ಕೆಲಸ.