ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಚಳಿಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿಯಲಿದ್ದು, ಬೆಂಗಳೂರಿನಲ್ಲೂ ಕನಿಷ್ಠ ತಾಪಮಾನ 12°C ವರೆಗೆ ಇಳಿಯುವ ಸಾಧ್ಯತೆಯಿದೆ.
ಬೆಂಗಳೂರು (ಡಿ.12): ರಾಜ್ಯದಲ್ಲಿ ಚಳಿಯ ಪ್ರಮಾಣ ಮುಂದಿನ ಮೂರು ದಿನಗಳ ಕಾಲ ಏರಿಕೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನವು ಗಣನೀಯವಾಗಿ ಕುಸಿಯಲಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲೂ ಚಳಿ ಹೆಚ್ಚಾಗಲಿದೆ.
ಉತ್ತರ ಕರ್ನಾಟಕದಲ್ಲಿ ತೀವ್ರ ಚಳಿ:
ಪ್ರಮುಖವಾಗಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಭಾರೀ ಚಳಿಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು 12°C ರಿಂದ 15°C ವರೆಗೆ ಇಳಿಯುವ ನಿರೀಕ್ಷೆಯಿದೆ. ಈ ಪ್ರದೇಶಗಳಲ್ಲಿ ಮುಂಜಾನೆ ದಟ್ಟ ಮಂಜು ಸಹ ಆವರಿಸುವ ಸಾಧ್ಯತೆಯಿದೆ. ಚಳಿ ಹೆಚ್ಚಾಗುತ್ತಿರುವ ಕಾರಣ ಜನರು ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಮತ್ತು ಮುಂಜಾನೆಯ ಪ್ರಯಾಣದ ವೇಳೆ ಜಾಗರೂಕರಾಗಿರುವುದು ಅವಶ್ಯಕವಾಗಿದೆ.
ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ ಕುಸಿತ:
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನವು ಸುಮಾರು 16°C ನಷ್ಟಿತ್ತು. ಇಂದೂ ಸಹ 17°C ತಾಪಮಾನ ದಾಖಲಾಗಿದೆ. ಆದರೆ, ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಚಳಿ ಮತ್ತಷ್ಟು ಹೆಚ್ಚಾಗಲಿದ್ದು, ಮುಂದಿನ ವಾರದ ವೇಳೆಗೆ ಕನಿಷ್ಠ ತಾಪಮಾನವು ಸುಮಾರು 12°Cರ ವರೆಗೆ ಇಳಿಯುವ ಸಾಧ್ಯತೆಯಿದೆ.
ಮಂಜಿನ ವಾತಾವರಣ: ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ (ಡಿಸೆಂಬರ್ 13 ಮತ್ತು 14) ಮಂಜು ಮುಸುಕಿದ ವಾತಾವರಣ ಮುಂದುವರಿಯಲಿದೆ. ಗರಿಷ್ಠ ತಾಪಮಾನವು ಸುಮಾರು 28°C ಆಗುವ ನಿರೀಕ್ಷೆಯಿದೆ. ಆದರೆ ಕನಿಷ್ಠ ತಾಪಮಾನವು 15°C ನ ಆಸುಪಾಸಿನಲ್ಲಿ ಉಳಿಯುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಒಣಹವೆ:
ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಪ್ರಮುಖವಾಗಿ ಒಣಹವೆ ಮುಂದುವರಿಯಲಿದೆ. ಈ ಭಾಗದಲ್ಲಿ ತಾಪಮಾನದಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬರುತ್ತಿಲ್ಲವಾದರೂ, ಮುಂಜಾನೆ ಮತ್ತು ಸಂಜೆ ವೇಳೆಗೆ ಚಳಿಯ ಅನುಭವ ಹೆಚ್ಚಾಗಲಿದೆ. ಈ ಬದಲಾವಣೆಯು ಸಾಮಾನ್ಯವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆ ವಹಿಸುವುದು ಉತ್ತಮ.


