ವಿಶ್ವಸಂಸ್ಥೆ ಸ್ಥಾಪಿತ ವಿವಿಯಿಂದ ವೆಂಕಯ್ಯ ನಾಯ್ಡಗೆ ಡಾಕ್ಟರೆಟ್‌  | ಕೋಸ್ಟರಿಕಾದ ಪೀಸ್‌ ವಿವಿಯಿಂದ ಪ್ರದಾನ  | ಭಾರತೀಯಗೆ ಸಿಕ್ಕ ಮೊದಲ ಗೌರವ ಡಾಕ್ಟರೆಟ್‌ 

ಬೆಂಗಳೂರು (ಮಾ. 10): ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಕೋಸ್ಟಾರಿಕಾ ದೇಶದ ರಾಜಧಾನಿ ಸ್ಯಾನ್‌ ಓಸೆಯಲ್ಲಿರುವ ಪೀಸ್‌ ವಿಶ್ವವಿದ್ಯಾಲಯವು ಗೌರವ ಡಾಕ್ಟರೆಟ್‌ ಪ್ರದಾನ ಮಾಡಿದೆ. ಕೋಸ್ಟಾರಿಕಾದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಡಾಕ್ಟರೆಟ್‌ ನೀಡಿ ಗೌರವಿಸಲಾಯಿತು. ‘ಭಾರತದಲ್ಲಿ ಪ್ರಜಾಪ್ರಭುತ್ವ , ಕಾನೂನು ಮತ್ತು ಸುಸ್ಥಿರ ಅಭಿವೃದ್ಧಿ’ಗಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೆಟ್‌ ಪ್ರದಾನ ಮಾಡಲಾಗಿದೆ.

ಪೀಸ್‌ ವಿವಿ ವಿಶ್ವಸಂಸ್ಥೆಯಿಂದ ಸ್ಥಾಪಿಸಲ್ಪಟ್ಟವಿಶ್ವವಿದ್ಯಾಲಯವಾಗಿದೆ. ವೆಂಕಯ್ಯ ನಾಯ್ಡು ಅವರು ಪೀಸ್‌ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್‌ ಪಡೆದ ಮೊದಲ ಭಾರತೀಯರಾಗಿದ್ದಾರೆ. 2014ರಿಂದ ಮೂರು ವರ್ಷಗಳ ಕಾಲ ಕೇಂದ್ರ ಸರ್ಕಾರದಲ್ಲಿ ವೆಂಕಯ್ಯ ನಾಯ್ಡು ನಗರಾಭಿವೃದ್ಧಿ ಸಚಿವರಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದಾರೆ.

ಸಚಿವರಾಗಿದ್ದ ವೇಳೆ ಪರಿಸರ ಸ್ನೇಹಿಯಾದ, ನಗರ ಪ್ರದೇಶಗಳ ಸುಸ್ಥಿರ ಅಭಿವೃದ್ಧಿಗಾಗಿ ಯೋಜನೆಗಳನ್ನು ಜಾರಿಗೊಳಿಸಿದ್ದರು. ಹೊಸ ಕಲ್ಪನೆಯಲ್ಲಿ ನಗರಗಳ ಅಭಿವೃದ್ಧಿ, ಬಡವರಿಗೆ ಮನೆಗಳು ಸೇರಿದಂತೆ ಹಲವು ಪ್ರಗತಿಪರ ಯೋಜನೆಗಳನ್ನು ತಂದಿದ್ದರು. ಅವರ ಸೇವೆಯು ಶ್ಲಾಘನೀಯವಾಗಿದ್ದು, ಅದನ್ನು ಪರಿಗಣಿಸಿ ಗೌರವ ಡಾಕ್ಟರೆಟ್‌ ಪ್ರದಾನ ಮಾಡಲಾಯಿತು ಎಂದು ವಿವಿ ಹೇಳಿಕೊಂಡಿದೆ.

ಗೌರವ ಡಾಕ್ಟರೆಟ್‌ ಸ್ವೀಕರಿಸಿ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಈ ಗೌರವವು ನಮ್ಮ ದೇಶಕ್ಕೆ ಸಂದ ಗೌರವವಾಗಿದೆ. ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನೋತ್ಸವವನ್ನು ವಿಶ್ವದಲ್ಲಿಯೇ ಸ್ಮರಿಸುವಾಗ ಈ ಗೌರವ ಪಡೆದುಕೊಳ್ಳುತ್ತಿರುವುದು ಹರ್ಷದ ಸಂಗತಿಯಾಗಿದೆ. ವಿಶ್ವದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಪ್ರತಿ ರಾಷ್ಟ್ರಗಳು ಒಗ್ಗೂಡಿ ಪರಿಶ್ರಮಿಸಬೇಕಿದೆ ಇದೆ ಎಂದು ಪ್ರತಿಪಾದಿಸಿದರು.