ಆಧಾರ್ ದುರ್ಬಳಕೆ ತಡೆಗೆ ಹೊಸ ಪ್ಲಾನ್..!

First Published 11, Jan 2018, 7:54 AM IST
Uidai New Plan To To Further Strengthen Privacy
Highlights

ಆಧಾರ್ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಈ ದೂರು ಪರಿಹರಿಸುವಂಥ ವ್ಯವಸ್ಥೆಯೊಂದನ್ನು ಆಧಾರ್ ಪ್ರಾಧಿಕಾರ ಜಾರಿಗೆ ತಂದಿದೆ.

ನವದೆಹಲಿ (ಜ.11): ಆಧಾರ್ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಈ ದೂರು ಪರಿಹರಿಸುವಂಥ ವ್ಯವಸ್ಥೆಯೊಂದನ್ನು ಆಧಾರ್ ಪ್ರಾಧಿಕಾರ ಜಾರಿಗೆ ತಂದಿದೆ. ವರ್ಚುವಲ್ ಐಡಿ ಹೆಸರಿನ ಈ ವ್ಯವಸ್ಥೆಯಡಿ, ಗ್ರಾಹಕನೋರ್ವ ತನ್ನ ನಿರ್ದಿಷ್ಟ ಆಧಾರ್ ಸಂಖ್ಯೆಯನ್ನು ಸೇವಾ ಸಂಸ್ಥೆಗೆ ನೀಡದೆಯೇ, ಆಧಾರ್ ಕಾರ್ಡ್‌ನ ಕೆಲ ಅಗತ್ಯ ಮಾಹಿತಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಆಧಾರನ್ನು ಬಳಸುವ ಎಲ್ಲ ಸಂಸ್ಥೆಗಳು ಜೂನ್ 1 ರಿಂದ ಹೊಸ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ. ಮಾರ್ಚ್ 1ರಿಂದಲೇ ವರ್ಚುವಲ್ ಸಂಖ್ಯೆ ವಿತರಣೆ ಆರಂಭವಾಗಲಿದೆ ಎಂದು ಆಧಾರ್ ಪ್ರಾಧಿಕಾರ ತಿಳಿಸಿದೆ.

ವರ್ಚುವಲ್ ಐಡಿ: ವರ್ಚುವಲ್ ಗುರುತು ಸಂಖ್ಯೆ ವ್ಯವಸ್ಥೆಯು ಆಧಾರ್ ಸಂಖ್ಯೆಯ ಪರ್ಯಾಯವಾಗಿರುತ್ತದೆ. ಇದರ ಅನುಸಾರ ಆಧಾರ್ ಗುರುತು ಚೀಟಿದಾರನಿಗೆ 16 ಅಂಕಿಗಳ ವರ್ಚುವಲ್ ಗುರುತು ಸಂಖ್ಯೆಯನ್ನು ನೀಡಲಾಗುತ್ತದೆ. ಯಾವುದಾದರೂ ಸೇವೆ ಪಡೆಯಲು ಆಧಾರ್ ನಂಬರ್ ನೀಡುವ ಬದಲು ವರ್ಚುವಲ್ ಸಂಖ್ಯೆಯನ್ನು ಆಧಾರ್ ಚೀಟಿದಾರನು ನೀಡಬಹುದು. ಈ ವರ್ಚುವಲ್ ಸಂಖ್ಯೆಯನ್ನು ಆಧರಿಸಿ ಆಧಾರ್ ನಂಬರ್ ಪತ್ತೆ ಮಾಡಲು ಸೇವಾದಾರ ಕಂಪನಿಗೆ ಸಾಧ್ಯವಾಗದು. ಹೀಗಾಗಿ ದುರ್ಬಳಕೆ ಅಸಾಧ್ಯ ಎಂದು ತಿಳಿಸಲಾಗಿದೆ. ಆಧಾರ್ ಪ್ರಾಧಿಕಾರದ ವೆಬ್‌ಸೈಟ್ ಅಥವಾ ಮೊಬೈಲ್‌ನಲ್ಲಿ ಆಧಾರ್ ಆ್ಯಪ್ ಮೂಲಕ ಇಂಥ ಸಂಖ್ಯೆಯನ್ನು ಸೃಷ್ಟಿಸಿಕೊಳ್ಳಬಹುದು.

ಸೀಮಿತ ಕೆವೈಸಿ: ಇನ್ನು ಆಧಾರ್ ಆಧರಿತ ಸೇವೆಯನ್ನು ಒದಗಿಸುವ ಕಂಪನಿಗಳು ಆಧಾರ್ ಸಂಖ್ಯೆಯನ್ನು ದುರ್ಬಳಕೆ ಮಾಡುವುದನ್ನು ತಡೆಗಟ್ಟಲು ಸೀಮಿತ ಕೆವೈಸಿ (ನೋ ಯುವರ್ ಕಸ್ಟಮರ್) ವ್ಯವಸ್ಥೆ ಜಾರಿಗೆ ಬರಲಿದೆ. ಎಂದರೆ ಒಂದು ನಿರ್ದಿಷ್ಟ ಸೇವೆಯನ್ನು ಪಡೆಯಬೇಕು ಎಂದರೆ ಆ ಸೇವೆಗೆ ಮಾತ್ರ ಪ್ರತ್ಯೇಕ ಕೆವೈಸಿ ವಿವರಗಳನ್ನು ಗ್ರಾಹಕರು ಸಲ್ಲಿಸಬೇಕು. ಆ ಸೇವೆಗೆ ಸೀಮಿತವಾಗಿ ಒಂದು ನಿರ್ದಿಷ್ಟ ಗುರುತು ಸಂಖ್ಯೆಯನ್ನು ಆಧಾರ್ ಪ್ರಾಧಿಕಾರ ನೀಡುತ್ತದೆ. ಇದರಿಂದ ಅನ್ಯ ಉದ್ದೇಶಗಳಿಗೆ ಆಧಾರ್ ನಂಬರನ್ನು ಬಳಸಿಕೊಳ್ಳಲು ಸೇವಾದಾರ ಕಂಪನಿಗೆ ಸಾಧ್ಯವಾಗುವುದಿಲ್ಲ. ಸೇವಾದಾರ ಸಂಸ್ಥೆಗಳು ಟೋಕನ್ ಮೂಲಕ ಗ್ರಾಹಕರನ್ನು ಗುರುತಿಸಬೇಕಾಗುತ್ತದೆ.

loader